ಪೂಂಚ್(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಇಬ್ಬರು ಉಗ್ರರನ್ನು ಭಾರತೀಯ ಸೇನಾ ಪಡೆ ಹೊಡೆದುರುಳಿಸಿದೆ. ಶನಿವಾರ ತಡರಾತ್ರಿ ಜಿಲ್ಲೆಯ ಬಾಲಕೋಟ್ ವಲಯದಲ್ಲಿ ಕಾರ್ಯಾಚರಣೆ ನಡೆಯಿತು. ಎಲ್ಒಸಿ ಬಳಿ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ಸೇನಾ ಸಿಬ್ಬಂದಿ ಸ್ಥಳವನ್ನು ಸುತ್ತುವರೆದು, ಶೋಧಿಸಿ ದಾಳಿ ನಡೆಸಿದೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುಂಡಿನ ದಾಳಿ ಕೆಲ ನಿಮಿಷಗಳ ಕಾಲ ನಡೆಯಿತು. ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಗಡಿಯಾಚೆಯಿಂದ ಯಾವುದೇ ಒಳನುಸುಳುವಿಕೆ ಯತ್ನ ನಡೆಯದಂತೆ ನೋಡಿಕೊಳ್ಳಲು ಈ ಪ್ರದೇಶದಲ್ಲಿ ನಿಗಾ ಇರಿಸಲಾಗಿದೆ ಎಂದು ಅವರು ತಿಳಿಸಿದರು. ಇದೇ ವೇಳೆ,ರಾಜೌರಿ ಜಿಲ್ಲೆಯ ಡ್ಯಾಂಗ್ರಿ ಗ್ರಾಮದ ಮೇಲೆ ನಡೆದ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಸ್ಫೋಟ: ಮಗು ಸಾವು, ಐವರಿಗೆ ಗಾಯ
ಈ ದಾಳಿಯಲ್ಲಿ ಸಿಲುಕಿ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು (ಜಿಎಂಸಿ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಿನ್ಸ್ ಶರ್ಮಾ ಎಂಬವರು ಇಂದು ಮೃತಪಟ್ಟಿದ್ದಾರೆ. ಡ್ಯಾಂಗ್ರಿ ಗ್ರಾಮದಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಶರ್ಮಾ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಶರ್ಮಾ ಅವರ ಸಹೋದರ ದೀಪಕ್ ಕುಮಾರ್ ಸೇರಿದಂತೆ ಆರು ಜನ ಈ ಮೊದಲು ಸಾವನ್ನಪ್ಪಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಡ್ಯಾಂಗ್ರಿಯಲ್ಲಿ ನಡೆದ ಘಟನೆ ಏನು?:ಜನವರಿ 1ರಂದು ಡ್ಯಾಂಗ್ರಿ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ಮೂರು ವಸತಿ ಗೃಹಗಳಿಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದರು. ಈ ಸಂಬಂಧ 13 ಮಂದಿ ಗಾಯಗೊಂಡಿದ್ದರು. ಅವರಲ್ಲಿ ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು ಮತ್ತು ನಾಲ್ವರ ಸ್ಥಿತಿ ಗಂಭೀರವಾಗಿತ್ತು. ಅದಾಗಿ ಮರುದಿನ ಇದ್ದಕ್ಕಿದ್ದಂತೆ ಅದೇ ಗ್ರಾಮದಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಒಂದು ಮಗು ಸಾವನ್ನಪ್ಪಿ, ಐವರು ಗಾಯಗೊಂಡಿದ್ದರು. ಇದೇ ವೇಳೆ ಮತ್ತೊಂದು ಶಂಕಿತ ಸುಧಾರಿತ ಸ್ಫೋಟಕ ಅಲ್ಲಿಯೇ ಪತ್ತೆಯಾಗಿದ್ದು, ತಜ್ಞ ಸಿಬ್ಬಂದಿ ತೆರವುಗೊಳಿಸಿದ್ದರು. ಈ ದುಷ್ಕೃತ್ಯದ ರೂವಾರಿಗಳನ್ನು ಸದೆಬಡಿಯಲು ಸೇನೆ ಶೋಧ ಮುಂದುವರೆಸಿದೆ.
ಇದನ್ನೂ ಓದಿ:ಜಮ್ಮುವಿನಲ್ಲಿ ಗುಂಡಿನ ದಾಳಿಗೆ ಮೂವರು ಬಲಿ, 13 ಜನರಿಗೆ ಗಾಯ: ಭಯೋತ್ಪಾದಕ ಕೃತ್ಯದ ಶಂಕೆ