ಮೊರೆನಾ(ಮಧ್ಯಪ್ರದೇಶ): ದೇಶದಲ್ಲಿಂದು ಒಂದೇ ದಿನ ವಾಯಪಡೆಯು ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿ ಪತನಗೊಂಡಿವೆ. ವಿಮಾನಗಳು ಧರೆಗುರುಳುತ್ತಿದ್ದಂತೆ ಹೊತ್ತಿ ಉರಿದಿವೆ. ಈ ವೇಳೆ ಒಬ್ಬ ಪೈಲಟ್ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮತ್ತಿಬ್ಬರು ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ.
ಮೊರೆನಾದಲ್ಲಿ ಯುದ್ಧ ಮಿಮಾನಗಳು ಪತನ: ಸುಖೋಯ್-30 ಮತ್ತು ಮಿರಾಜ್ 2000 ವಿಮಾನಗಳು ಮಧ್ಯಪ್ರದೇಶದ ಮೊರೆನಾ ಬಳಿ ಪತನಗೊಂಡಿವೆ. ಜಿಲ್ಲೆಯ ಪಹಾರ್‌ಗಢ ಅರಣ್ಯದಲ್ಲಿ ಫೈಟರ್ ಜೆಟ್ ಬಿದ್ದ ನಂತರ ಬೆಂಕಿ ಕಾಣಿಸಿಕೊಂಡಿದ್ದು, ಮಾಹಿತಿ ತಿಳಿದ ಕೂಡಲೇ ಪೊಲೀಸ್ ಪಡೆ ಪಹಾರ್‌ಗಢ ಅರಣ್ಯಕ್ಕೆ ದೌಡಾಯಿಸಿತು. ಈ ಎರಡೂ ಯುದ್ಧ ವಿಮಾನಗಳು ಗ್ವಾಲಿಯರ್‌ನ ಐಎಎಫ್ ವಾಯುನೆಲೆಯಿಂದ ಇಂದು ಬೆಳಗ್ಗೆ ಟೇಕಾಫ್ ಆಗಿದ್ದವು. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಸುಖೋಯ್ -30 ಮತ್ತು ಮಿರಾಜ್ 2000 ಸೇರಿದಂತೆ ಈ ಎರಡೂ ಯುದ್ಧ ವಿಮಾನಗಳು ಮೊರೆನಾ ಬಳಿ ಪತನಗೊಂಡಿವೆ. ಈ ವಿಮಾನಗಳ ಅಪಘಾತದ ನಂತರ ಮಾಹಿತಿ ಪಡೆದ ತಕ್ಷಣ ಪರಿಹಾರ ತಂಡವು ಸ್ಥಳಕ್ಕೆ ತಲುಪಿತು.
ಮೊರೆನಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಫ್ರೆಂಚ್ ನಿರ್ಮಿತ ಮಿರಾಜ್ 2000 ಮತ್ತು ರಷ್ಯಾದ ನಿರ್ಮಿತ ಸುಖೋಯ್-30 ಸೇರಿವೆ. ಆಗಸದಲ್ಲಿ ಇನ್ನು ಸುಖೋಯ್ ಮತ್ತು ಮಿರಾಜ್ ಮಧ್ಯೆ ಡಿಕ್ಕಿ ಸಂಭವಿಸಿದೆಯಾ ಅಥವಾ ಇನ್ನೇನಾದರೂ ಸಮಸ್ಯೆ ಎದುರಾಯಿತಾ ಎಂಬುದು ತನಿಖೆ ಮೂಲಕ ತಿಳಿದು ಬರಬೇಕಿದೆ. ಅಪಘಾತದ ಸಮಯದಲ್ಲಿ ಸುಖೋಯ್ 30 ವಿಮಾನಗಳಲ್ಲಿ ಇಬ್ಬರು ಪೈಲಟ್‌ಗಳು ಇದ್ದರು. ಮಿರಾಜ್ 2000ದಲ್ಲಿ ಒಬ್ಬ ಪೈಲಟ್ ಇದ್ದರು. ಆರಂಭಿಕ ವರದಿಗಳ ಪ್ರಕಾರ ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ.
ರಾಜಸ್ಥಾನದಲ್ಲೂ ವಿಮಾನ ಪತನ:ಭಾರತೀಯ ವಾಯುಪಡೆಯ ಮಿಗ್ ವಿಮಾನವು ಜಿಲ್ಲೆಯ ಉಚೈನ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಪತನಗೊಂಡಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಸ್ಥಳೀಯ ಪೊಲೀಸರು ಮತ್ತು ಆಡಳಿತ ಮಂಡಳಿ ತಕ್ಷಣ ಸ್ಥಳಕ್ಕೆ ಧಾವಿಸಿದೆ. ಇದಾದ ಬಳಿಕ ವಾಯುಪಡೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಧಾವಿಸಿದ್ದಾರೆ. ಉತ್ತರ ಪ್ರದೇಶದ ಆಗ್ರಾ ಏರ್ ಫೋರ್ಸ್ ಸ್ಟೇಷನ್ನಿಂದ ಈ ವಿಮಾನ ಟೇಕ್ ಆಫ್ ಆಗಿರುವ ಸಾಧ್ಯತೆ ಇದೆ. ಪ್ರಸ್ತುತ ವಾಯುಪಡೆಯು ಅಪಘಾತದ ಕಾರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.