ಸ್ಪೇನ್:ಜಾಗತಿಕ ವಿಮಾನ ತಯಾರಕ ಸಂಸ್ಥೆಯಾದ ಏರ್‌ಬಸ್‌ನಿಂದ ಭಾರತಕ್ಕಾಗಿ ನಿರ್ಮಿಸಲಾದ C-295 ಹೆಸರಿನ ಮೊದಲ ಸಾರಿಗೆ ವಿಮಾನವನ್ನು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಬುಧವಾರ ಸ್ಪೇನ್‌ನಲ್ಲಿ ಸ್ವೀಕರಿಸಿದರು. ಏರ್‌ಬಸ್ ಅಧಿಕಾರಿಗಳು ವಿಮಾನದ ಕೀಗಳನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥ ಚೌಧರಿಗೆ ನೀಡಿದರು.
ಮೊದಲ C-295 ಸಾರಿಗೆ ವಿಮಾನವನ್ನು ಪಡೆದ ನಂತರ ಮಾತನಾಡಿದ ವಾಯುಪಡೆಯ ಮುಖ್ಯಸ್ಥರು, ಇಡೀ ದೇಶಕ್ಕೆ ಇದೊಂದು ಮೈಲಿಗಲ್ಲಾಗಿದೆ. ಆತ್ಮನಿರ್ಭರ್ ಭಾರತದ ಸಾಫಲ್ಯವಾಗಿದೆ. ವಾಯುಸೇನೆಗೆ ಇದು ಬಲ ತುಂಬಲಿದೆ. ಇದು ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ ಎಂದು ಹೇಳಿದರು.
ಆತ್ಮನಿರ್ಭರ್ ಭಾರತ್ ಅಡಿಯಲ್ಲಿ ಈ ಸ್ಥಾವರದಿಂದ ಮೊದಲ 16 ವಿಮಾನಗಳು ಹೊರಬಂದ ನಂತರ, 17 ನೇ ವಿಮಾನವನ್ನು ಭಾರತದಲ್ಲೇ ತಯಾರಿಸಲಾಗುತ್ತದೆ. ಇದು ಭಾರತೀಯ ವಾಯುಯಾನ ಉದ್ಯಮದ ದೊಡ್ಡ ಹೆಜ್ಜೆಯಾಗಿದೆ. ಸ್ವದೇಶದಲ್ಲೇ ಮೊದಲ ಮಿಲಿಟರಿ ಸಾರಿಗೆ ವಿಮಾನವನ್ನು ತಯಾರಿಸಲಾಗುತ್ತದೆ ಎಂದರು.
C-295 ಮಾದರಿಯ 16 ವಿಮಾನಗಳನ್ನು ಸ್ಪೇನ್‌ನಲ್ಲಿ ಉತ್ಪಾದಿಸಲಾಗುತ್ತದೆ. ಉಳಿದ 40 ವಿಮಾನಗಳನ್ನು ಭಾರತದ ಟಾಟಾ ಮತ್ತು ಏರ್‌ಬಸ್ ಜಂಟಿಯಾಗಿ ಗುಜರಾತ್‌ನ ವಡೋದರಾದಲ್ಲಿರುವ ಘಟಕದಲ್ಲಿ ತಯಾರಿಸಲಿವೆ. ಇದು ಆತ್ಮನಿರ್ಭರ್ ಭಾರತದ ಅಡಿಯಲ್ಲಿ ನಡೆಯಲಿದೆ ಎಂದು ಹೇಳಿದರು.
ಸೆಪ್ಟೆಂಬರ್‌ನಲ್ಲಿ ವಿಮಾನ ಸೇವೆಗೆ:ಸೆಪ್ಟೆಂಬರ್‌ನಲ್ಲಿ ಈ ವಿಮಾನವನ್ನು ಔಪಚಾರಿಕವಾಗಿ ವಾಯುದಳದ ಸೇವೆಗೆ ನೀಡುವ ನಿರೀಕ್ಷೆಯಿದೆ. ಭಾರತೀಯ ರಕ್ಷಣಾ ಸಚಿವಾಲಯ ಮತ್ತು ಸ್ಪೇನ್ನ ರಕ್ಷಣಾ ಮತ್ತು ಬಾಹ್ಯಾಕಾಶ ಸಂಸ್ಥೆಯಾದ ಏರ್‌ಬಸ್ 2021 ರ ಸೆಪ್ಟೆಂಬರ್‌ನಲ್ಲಿ ಭಾರತೀಯ ವಾಯುಪಡೆಗೆ 56 C-295 ವಿಮಾನಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕಿವೆ. C-295 MW ವಿಮಾನವು 5 ರಿಂದ 10 ಟನ್ ಸಾಮರ್ಥ್ಯದ ಸಾರಿಗೆ ವಿಮಾನವಾಗಿದ್ದು, ಸಮಕಾಲೀನ ತಂತ್ರಜ್ಞಾನವನ್ನು ಹೊಂದಿದೆ. ಭಾರತೀಯ ವಾಯುಪಡೆಯ ಹಳೆಯ ಸಾರಿಗೆ ವಿಮಾನವಾದ ಅವ್ರೋ ಇನ್ನು ತೆರೆಮರೆಗೆ ಸರಿಯಲಿದೆ.
ಒಪ್ಪಂದಕ್ಕೆ ಸಹಿ ಹಾಕಿದ 48 ತಿಂಗಳೊಳಗೆ 16 ವಿಮಾನಗಳನ್ನು ಸ್ಪೇನ್‌ನಿಂದ ತಯಾರಿಸಲಾಗುತ್ತಿದೆ. ಇದಾದ ಬಳಿಕ 10 ವರ್ಷಗಳಲ್ಲಿ ಉಳಿದ 40 ವಿಮಾನಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ವಿದೇಶಿ ಖಾಸಗಿ ಕಂಪನಿಯೊಂದು ಭಾರತದಲ್ಲಿ ಮಿಲಿಟರಿ ವಿಮಾನವನ್ನು ತಯಾರಿಸುತ್ತಿರುವ ಮೊದಲ ಯೋಜನೆ ಇದಾಗಿದೆ.
ಎಲ್ಲಾ 56 ವಿಮಾನಗಳನ್ನು ಸ್ಥಳೀಯ ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್‌ನೊಂದಿಗೆ ಸ್ಥಾಪಿಸಲಾಗುವುದು. ಈ ಯೋಜನೆಯು ಭಾರತದಲ್ಲಿ ಏರೋಸ್ಪೇಸ್ ವ್ಯವಸ್ಥೆಗೆ ಉತ್ತೇಜನ ನೀಡಲಿದೆ. ಈ ಯೋಜನೆಯಲ್ಲಿ ದೇಶದ ಹಲವಾರು MSMEಗಳು ವಿಮಾನದ ಬಿಡಿಭಾಗಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:ಉಗ್ರರ ದಾಳಿಯಿಂದ ಯೋಧನ ಉಳಿಸಿ, ತನ್ನ ಪ್ರಾಣ ಬಿಟ್ಟ 'ಕೆಂಟ್'..ಸೇನೆಯಿಂದ ಹುತಾತ್ಮ ಶ್ವಾನಕ್ಕೆ ಸಲಾಂ