ಅಹಮದಾಬಾದ್:ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನೂ ಗೆಲ್ಲುವ ಮೂಲಕ ಭಾರತ 3-0 ಅಂತರದಲ್ಲಿ ಸರಣಿಯನ್ನು ಕ್ಲೀನ್ಸ್ವೀಪ್ ಸಾಧಿಸಿದೆ.
ಶುಕ್ರವಾರ ನಡೆದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 266 ರನ್ಗಳ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ತಂಡ 37.1 ಓವರ್ಗಳಲ್ಲಿ 169 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ದಯನೀಯ ಸೋಲು ಅನುಭವಿಸಿತು. ಈ ಮೂಲಕ ಭಾರತ ಮೂರನೇ ಪಂದ್ಯದಲ್ಲಿ 96 ರನ್ಗಳ ಜಯ ಸಾಧಿಸಿತು.
ಭಾರತೀಯ ಬೌಲರ್ಗಳ ಕರಾರುವಾಕ್ ದಾಳಿ:ಭಾರತೀಯ ಬೌಲರ್ಗಳ ದಾಳಿಯ ಮುಂದೆ ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೊಬ್ಬರು ಪೆವಿಲಿಯನ್ ಪರೇಡ್ ನಡೆಸಿದರು. ವೇಗದ ಬೌಲರ್ ಮೊಹಮದ್ ಸಿರಾಜ್ ತಾವೆಸೆದ ಮೂರನೇ ಓವರ್ನಲ್ಲಿಯೇ ಶಾಯ್ ಹೋಪ್ ಅವರನ್ನು ಬಲಿ ತೆಗೆದುಕೊಳ್ಳುವ ಮೂಲಕ ಕೆರೆಬಿಯನ್ನರ ಪತನಕ್ಕೆ ನಾಂದಿ ಹಾಡಿದರು.
ವೆಸ್ಟ್ ಇಂಡೀಸ್ ತಂಡ 25 ರನ್ ಗಳಿಸುವಷ್ಟರಲ್ಲಿ ಪ್ರಮುಖ ಬ್ಯಾಟ್ಸ್ಮನ್ಗಳಾದ ಶಾಯ್ ಹೋಪ್(5), ಬ್ರೆಂಡೆನ್ ಕಿಂಗ್(14), ಶಮ್ರಾಹ್ ಬ್ರೂಕ್ಸ್(0) ವಿಕೆಟ್ ಕಳೆದುಕೊಂಡು ಪತನದ ಹಾದಿ ಹಿಡಿಯಿತು. ಈ ವೇಳೆ ಡ್ಯಾರನ್ ಬ್ರಾವೋ(19) ಮತ್ತು ನಿಕೋಲಸ್ ಪೂರನ್(34) ಅಲ್ಪ ವಿರೋಧ ತೋರಿಸಿದರು.
ಜೊತೆಯಾಟ ಕಟ್ಟುತ್ತಿದ್ದ ಇಬ್ಬರನ್ನು ಬೇರ್ಪಡಿಸಲು ನಾಯಕ ರೋಹಿತ್ ಶರ್ಮಾ ಯುವ ವೇಗಿ ಪ್ರಸಿದ್ಧ ಕೃಷ್ಣರನ್ನು ದಾಳಿಗಿಳಿಸಿದ್ದು ಫಲ ನೀಡಿತು. 19 ರನ್ ಗಳಿಸಿದ್ದ ಡ್ಯಾರನ್ ಬ್ರಾವೋ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಔಟಾದರು.
ಸ್ಮಿತ್-ಜೋಸೆಫ್ ಹೊಡಿಬಡಿ ಆಟ:ಬಳಿಕ ಕ್ರೀಸ್ಗೆ ಬಂದ ಜಾಸನ್ ಹೋಲ್ಡರ್ (6) ಮತ್ತು ಫ್ಯಾಬಿಯನ್ ಅಲೆನ್(0) ಸುತ್ತುವ ಮೂಲಕ ಮತ್ತೆ ಕುಸಿತಕ್ಕೆ ಕಾರಣವಾದರು. ಕಳೆದ ಪಂದ್ಯದಲ್ಲೂ ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟ್ ಬೀಸಿ ಗುಡುಗಿದ್ದ ಓಡಿಯನ್ ಸ್ಮಿತ್(36)ಮತ್ತು ಅಲ್ಜಾರಿ ಜೋಸೆಫ್(29) ಈ ಪಂದ್ಯದಲ್ಲೂ ರನ್ ಪೇರಿಸಿದರು. ಸ್ಮಿತ್ 3 ಸಿಕ್ಸರ್ ಸಿಡಿಸಿದರೆ, ಜೋಸೆಫ್ 2 ಬೌಂಡರಿ ಗೆರೆ ದಾಟಿಸಿ ಭಾರತೀಯ ಬೌಲರ್ಗಳ ಕಾಡಿದರು.
ಕೃಷ್ಣ - ಸಿರಾಜ್ ಮೊನಚಿನ ದಾಳಿ:ಪ್ರಸಿದ್ಧ ಕೃಷ್ಣ ಸರಣಿಯಲ್ಲಿ ಉತ್ತಮ ಬೌಲಿಂಗ್ ಲಯದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ 4 ವಿಕೆಟ್ ಪಡೆದಿದ್ದ ಕೃಷ್ಣ ಈ ಪಂದ್ಯದಲ್ಲಿ 3 ವಿಕೆಟ್ ಕಿತ್ತು ಕೆರೆಬಿಯನ್ನರ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಪ್ರಸಿದ್ಧ ಕೃಷ್ಣಗೆ ಸಾಥ್ ನೀಡಿದ ಮೊಹಮದ್ ಸಿರಾಜ್ ಕೂಡ 3 ವಿಕೆಟ್ ಕಿತ್ತು ಪ್ರವಾಸಿಗರ ಗೆಲುವಿನ ಆಸೆಗೆ ತಣ್ಣೀರೆರಚಿದರು.