ನವದೆಹಲಿ : ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿದೆ. ಇಸ್ರೋದ ಐತಿಹಾಸಿಕ ಸಾಧನೆಯನ್ನು ಖ್ಯಾತ ವಿಜ್ಞಾನಿ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾಜಿ ಮಹಾನಿರ್ದೇಶಕ (ಡಿಜಿ) ಡಾ. ವಿಜಯ್ ಕುಮಾರ್ ಸಾರಸ್ವತ್ ಅವರು ಶ್ಲಾಘಿಸಿದ್ದಾರೆ. ಜೊತೆಗೆ, ಭಾರತವು ಜಾಗತಿಕವಾಗಿ ಹೊರಹೊಮ್ಮುತ್ತಿರುವ ಬಾಹ್ಯಾಕಾಶ ಆರ್ಥಿಕತೆಯ ಭಾಗವಾಗಲು ಮುನ್ನುಗ್ಗುತ್ತಿದೆ ಎಂದು ಹೇಳಿದರು.
'ಈಟಿವಿ ಭಾರತ' ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಭಿಪ್ರಾಯ ಹಂಚಿಕೊಂಡ ಸಾರಸ್ವತ್, "ಭಾರತವು ತನ್ನ ಸ್ಪರ್ಧಾತ್ಮಕತೆಯೊಂದಿಗೆ ಜಾಗತಿಕ ಬಾಹ್ಯಾಕಾಶ ಆರ್ಥಿಕತೆ 4.0 ನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸ್ಪೇಸ್ 4.0 ಬಾಹ್ಯಾಕಾಶ ಕ್ಷೇತ್ರದ ವಿಕಸನವು ಹೊಸ ಯುಗವನ್ನೇ ಪ್ರತಿನಿಧಿಸುತ್ತದೆ, ಈ ಯುಗವು ಸರ್ಕಾರಗಳು, ಖಾಸಗಿ ವಲಯ, ಸಮಾಜ ಮತ್ತು ರಾಜಕೀಯದ ನಡುವಿನ ಪರಸ್ಪರ ಹೊಂದಾಣಿಕೆಯ ಮೂಲಕ ತೆರೆದುಕೊಳ್ಳುತ್ತದೆ" ಎಂದಿದ್ದಾರೆ.
"ನಮ್ಮ ಎಲ್ಲಾ ಮಿಷನ್‌ಗಳು ಕಡಿಮೆ ವೆಚ್ಚದಲ್ಲಿದ್ದು, ಆದರೂ ನಾವು ಯಶಸ್ಸು ಗಳಿಸುತ್ತಿದ್ದೇವೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಉಪಗ್ರಹವನ್ನು ಉಡಾವಣೆ ಮಾಡಬಹುದು ಎನ್ನುವುದನ್ನು ಭಾರತ ತೋರಿಸಿಕೊಟ್ಟಿದೆ. ಹಾಗೆಯೇ, ಬಾಹ್ಯಾಕಾಶ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಪ್ರಮುಖ ದೇಶಗಳೊಂದಿಗೆ ನಾವು ಸಹಯೋಗ ಹೊಂದಿದ್ದೇವೆ. ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ಬದಲಾವಣೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಬಾಹ್ಯಾಕಾಶ ಯಾತ್ರೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಪ್ರಚೋದಿಸಲಾಗಿದೆ. ನಾವು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ನೀಡುತ್ತಿದ್ದೇವೆ. ಹೆಚ್ಚಿನ ಯುವಕರು ಭವಿಷ್ಯದಲ್ಲಿ ಬಾಹ್ಯಾಕಾಶ ಇಂಜಿನಿಯರ್‌ಗಳಾಬೇಕೆಂದು ಬಯಸುತ್ತಿದ್ದಾರೆ" ಎಂದು ಹೇಳಿದರು.