ನವದೆಹಲಿ:ಚೀನಾ ಮತ್ತು ಭಾರತದ ನಡುವಿನ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ವಿಚಾರದಲ್ಲಿ ಯಥಾಸ್ಥಿತಿ ಮುಂದುವರೆಯಲಿದ್ದು, ಏಕಪಕ್ಷೀಯವಾಗಿ ಯಾವುದೇ ಬದಲಾವಣೆ ಮಾಡಲು ಭಾರತ ಒಪ್ಪುವುದಿಲ್ಲ ಎಂದು ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಸ್ಪಷ್ಟನೆ ನೀಡಿದ್ದಾರೆ
ಪ್ಯಾರಿಸ್‌ನಲ್ಲಿರುವ ಫ್ರೆಂಚ್ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಶನಲ್ ರಿಲೇಶನ್ಸ್ (ಐಎಫ್‌ಆರ್‌ಐ) ಉದ್ದೇಶಿಸಿ ಮಾತನಾಡಿದ ಡಾ.ಎಸ್ ಜೈಶಂಕರ್ ನಾವು ಇದೇ ವಿಚಾರವಾಗಿ ಕಮಾಂಡರ್ಗಳಿಂದ 13 ಸುತ್ತಿನ ಮಾತುಕತೆ ನಡೆಸಿದ್ದೇವೆ. ಚೀನಾ ಮತ್ತು ಭಾರತ ನಡುವಿನ ಗಡಿ ವಿಚಾರದಲ್ಲಿ ಕೆಲವೊಂದು ಘರ್ಷಣೆ ಉಂಟುಮಾಡುವ ಸಮಸ್ಯೆಗಳನ್ನು ಪರಿಹರಿಸಬೇಕಿದೆ ಎಂದು ಜೈಶಂಕರ್ ಅಭಿಪ್ರಾಯಪಟ್ಟರು.
ಇಂಡೋ - ಪೆಸಿಫಿಕ್ ಭಾಗದಲ್ಲಿ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಬಲಪಡಿಸುವ ಗುರಿಯನ್ನು ಕ್ವಾಡ್ ರಾಷ್ಟ್ರಗಳು ಹೊಂದಿವೆ. ಈ ಸಮಾನ ಮನಸ್ಸಿನ ರಾಷ್ಟ್ರಗಳು (ಭಾರತ, ಆಸ್ಟ್ರೇಲಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಜಪಾನ್) ಸುರಕ್ಷಿತ, ಸ್ವತಂತ್ರ ಇಂಡೋಪೆಸಿಫಿಕ್ ಭಾಗಕ್ಕಾಗಿ ಪ್ರಯತ್ನಿಸುತ್ತವೆ ಎಂದು ಜೈಶಂಕರ್ ಹೇಳಿದ್ದಾರೆ. ಚೀನಾ ಯಾವಾಗಲೂ ಕ್ವಾಡ್ ಒಕ್ಕೂಟವನ್ನು ಅನುಮಾನ ದೃಷ್ಟಿಯಿಂದ ನೋಡುತ್ತದೆ ಮತ್ತು ಕ್ವಾಡ್ ಸದಸ್ಯರನ್ನು ಚೀನಾ ವಿರೋಧಿಸುತ್ತದೆ ಮತ್ತು ಇಂಡೋ-ಪೆಸಿಫಿಕ್ ಪರಿಸರಕ್ಕೆ ಕ್ವಾಡ್ ಹಾನಿ ಮಾಡುತ್ತದೆ ಎಂದು ಆರೋಪಿಸುತ್ತಿದೆ ಎಂದು ಜೈಶಂಕರ್ ಹೇಳಿದರು.
ಕ್ವಾಡ್‌ನ ಮಹತ್ವದ ಕುರಿತು ಮಾತನಾಡಿದ ಡಾ.ಜೈಶಂಕರ್, 'ಕ್ವಾಡ್‌ನ ಮೂಲವು 2004ರ ವರ್ಷದಷ್ಟು ಹಳೆಯದು. ಸುನಾಮಿ ಸಂಭವಿಸಿದ ನಂತರ ಕ್ವಾಡ್ ದೇಶಗಳು ಸಂಘಟಿತವಾಗಿ ಪರಸ್ಪರ ಸಹಕಾರ ನೀಡಿದವು. ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳಲ್ಲಿ ಕ್ವಾಡ್ ಸಹಾಯ ಮಾಡುತ್ತದೆ' ಎಂದಿದ್ದಾರೆ.
ಇದನ್ನೂ ಓದಿ:ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಮೋದಿ ಜೊತೆ 'ಟಿವಿ ಸಂವಾದ' ಬಯಸಿದ ಪಾಕ್ ಪ್ರಧಾನಿ