ಇದೇ ಬರುವ ಜೂನ್ 30 ರಂದು ಈ ವರ್ಷದ ಎರಡನೇ ಬಾಹ್ಯಾಕಾಶ ಉಡಾವಣೆಗೆ ಭಾರತ ಸಿದ್ಧತೆ ನಡೆಸುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜೂನ್ 22ರ ತನ್ನ ಪ್ರಕಟಣೆಯಲ್ಲಿ ಪೋಲಾರ್ ಉಪಗ್ರಹ ಉಡಾವಣಾ ವಾಹನವು ಬೆಳಗಿನ 8:30ರ ಸಮಯದಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿದೆ ಎಂದು ತಿಳಿಸಿದೆ.
ಈ ಉಡಾವಣಾ ವಾಹನವು ಭೂಮಿಯ ಕೆಳ ಕಕ್ಷೆಗೆ (ಲೋ ಅರ್ತ್ ಆರ್ಬಿಟ್) ಸಿಂಗಾಪುರದ ಮೂರು ಉಪಗ್ರಹಗಳನ್ನು ಜೋಡಿಸಲಿದೆ. ಲೋ ಅರ್ಥ್ ಆರ್ಬಿಟ್ (ಭೂಮಿಯ ಕೆಳಕಕ್ಷೆ) ಎನ್ನುವುದು ಭೂಮಿ ಕೇಂದ್ರಿತವಾದ ಕಕ್ಷೆ. ಇದು ಭೂಮಿಯಿಂದ 2,000 ಕಿ.ಮೀ. ಅಥವಾ ಅದಕ್ಕಿಂತ ಕಡಿಮೆ ಎತ್ತರದಲ್ಲಿದೆ. ಈ ಎತ್ತರದಲ್ಲಿ ಸ್ಯಾಟಲೈಟ್ ಭೂಮಿಯ ಕಕ್ಷೆಯನ್ನು 84 ರಿಂದ 127 ನಿಮಿಷಗಳಲ್ಲಿ ಸುತ್ತುತ್ತದೆ.
ಈ ಉಡಾವಣಾ ವಾಹನವು ಭಾರತದ ಆರ್ಬಿಟಲ್ ಪ್ಲಾಟ್‌ಫಾರ್ಮ್ (ಕಕ್ಷೆಯ ನಿಲ್ದಾಣ) ಅನ್ನೂ ಕೊಂಡೊಯ್ಯಲಿದೆ. ಈ ಆರ್ಬಿಟಲ್ ಭೂಮಿಯ ಕಕ್ಷೆಯಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳಲಿದೆ ಎಂದು ಇಸ್ರೋ ಹೇಳಿಕೆ ನೀಡಿದೆ. ಇಸ್ರೋ ತನ್ನ ಈ ವರ್ಷದ ಮೊದಲ ಉಡಾವಣೆಯನ್ನು ಫೆಬ್ರವರಿ ತಿಂಗಳಲ್ಲಿ ಕೈಗೊಂಡಿದ್ದು, ಮೂರು ಉಪಗ್ರಹಗಳನ್ನು ಹೊತ್ತೊಯ್ದ ಪಿಎಸ್‌ಎಲ್‌ವಿ - ಸಿ52 ರಾಕೆಟ್ ಅವುಗಳನ್ನು ಸನ್ - ಸಿನ್ಕ್ರೊನಸ್ ಧ್ರುವೀಯ ಕಕ್ಷೆಗೆ ಸೇರಿಸಿತ್ತು.
ಎರಡನೇ ವಾಣಿಜ್ಯ ಉದ್ದೇಶದ ಉಡಾವಣೆ :25 ಗಂಟೆಗಳ ಉಡಾವಣಾ ಪೂರ್ವ ಕ್ಷಣಗಣನೆಯು ಜೂನ್ 29 ರಂದು ಬೆಳಗ್ಗೆ 7:30ಕ್ಕೆ ಆರಂಭವಾಗಲಿದೆ. ಇಸ್ರೋ ಈ ಉಡಾವಣೆಯು ತನ್ನ ವಾಣಿಜ್ಯಿಕ ಅಂಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಕೈಗೊಳ್ಳುತ್ತಿರುವ ಎರಡನೇ ವಾಣಿಜ್ಯ ಉದ್ದೇಶದ ಉಡಾವಣೆ ಎಂದು ತಿಳಿಸಿದೆ. ಈ ಸಂಸ್ಥೆಯನ್ನು ಮಾರ್ಚ್ 2019ರಲ್ಲಿ ಭಾರತೀಯ ಬಾಹ್ಯಾಕಾಶ ಯೋಜನೆಗಳಲ್ಲಿ ಸ್ಥಳೀಯ ಉದ್ಯಮಗಳೂ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಆರಂಭಿಸಲಾಯಿತು. ಇದರ ಮೊದಲ ವಾಣಿಜ್ಯ ಉದ್ದೇಶದ ಉಡಾವಣೆಯನ್ನು 2021ರ ಮಾರ್ಚ್ ನಲ್ಲಿ ಕೈಗೊಳ್ಳಲಾಯಿತು. ಆ ಉಡಾವಣೆಯಲ್ಲಿ ಪಿಎಸ್‌ಎಲ್‌ವಿ - ಸಿ51 ರಾಕೆಟ್ 19 ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ ಜೋಡಿಸಿತ್ತು.