ಅಹಮದಾಬಾದ್(ಗುಜರಾತ್):ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸುವ ಕೇಂದ್ರ ಸರ್ಕಾರದ ನೀತಿಯಿಂದಾಗಿ ಮುಂದಿನ 10 ವರ್ಷಗಳಲ್ಲಿ ದೇಶವು ದಾಖಲೆ ಪ್ರಮಾಣದ ವೈದ್ಯರನ್ನು ಪಡೆಯಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಗುಜರಾತ್‌ನ ಕಚ್ ಜಿಲ್ಲೆಯ ಭುಜ್‌ನಲ್ಲಿ 200 ಹಾಸಿಗೆಗಳ ಕೆ.ಕೆ.ಪಟೇಲ್ ಮುಟ್ಲಿ ವಿಶೇಷ ಆಸ್ಪತ್ರೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶಕ್ಕೆ ಸಮರ್ಪಿಸಿ ನಂತರ ಅವರು ಮಾತನಾಡಿದರು.
ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ನಿರ್ಮಿಸುವ ಗುರಿ ಇದೆ. ಇದರ ಸಾಕಾರದಿಂದ ದೇಶವು ಮುಂದಿನ 10 ವರ್ಷಗಳ ನಂತರ ದಾಖಲೆ ಸಂಖ್ಯೆಯ ವೈದ್ಯರನ್ನು ಪಡೆದುಕೊಳ್ಳುತ್ತದೆ. 2 ದಶಕಗಳ ಹಿಂದೆ ಗುಜರಾತ್ ಕೇವಲ 9 ವೈದ್ಯಕೀಯ ಕಾಲೇಜುಗಳನ್ನು ಹೊಂದಿತ್ತು. ಇದೀಗ ವೈದ್ಯಕೀಯ ಕ್ಷೇತ್ರ ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಿದೆ ಎಂದು ಮೋದಿ ಹೇಳಿದರು.
ಗುಜರಾತ್ ಒಂದು ಏಮ್ಸ್ ಮತ್ತು 38 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿದೆ. ಈ ಹಿಂದೆ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಕೇವಲ 1,000 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು, ಈಗ ಈ ಕಾಲೇಜುಗಳಲ್ಲಿ ಸುಮಾರು 6,000 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ರಾಜ್‌ಕೋಟ್‌ನ ಏಮ್ಸ್ 2021 ರಿಂದ 50 ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಪ್ರಾರಂಭಿಸಿದೆ. ಇದು ವೈದ್ಯರ ಸೃಷ್ಟಿಗೆ ಸಹಾಯಕವಾಗಿದೆ ಎಂದು ಮೋದಿ ಹೇಳಿದರು.