ಭುಜ್ (ಗುಜರಾತ್):2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಾಗ್ದಾನ ಮಾಡಿದ್ದಾರೆ.
ಗುಜರಾತ್ನ ಕಛ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, 2001ರ ಭೀಕರ ಭೂಕಂಪದ ನಂತರ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದ್ದೆ. ಈಗ 2022ರಲ್ಲಿ ಅದು ಎಷ್ಟು ಅಭಿವೃದ್ಧಿಯಾಗಿದೆ ಎಂಬುದನ್ನು ನೀವೇ ನೋಡಿ. ಇಂದು ನಾನು ಭಾರತವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಭರವಸೆ ನೀಡುತ್ತಿದ್ದೇನೆ. 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಮತ್ತು ಅದು ಖಂಡಿತವಾಗಿಯೂ ಸಾಧ್ಯ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಮೋದಿ ಅವರು ಭೂಕಂಪದಲ್ಲಿ ಮೃತಪಟ್ಟವರ ಸ್ಮರಣಾರ್ಥ ಭುಜ್‌ನಲ್ಲಿ ಸ್ಮೃತಿ ವನ ಮತ್ತು ಅಂಜಾರ್‌ನಲ್ಲಿ ವೀರ್ ಬಾಲಕ ಸ್ಮಾರಕವನ್ನು ಉದ್ಘಾಟಿಸಿದರು. ಈ ಎರಡು ಸ್ಮಾರಕಗಳು ಜಪಾನ್‌ನ ಹಿರೋಷಿಮಾ ಮ್ಯೂಸಿಯಂನಂತೆ ಕಛ್ಅನ್ನು ವಿಶ್ವದ ಭೂಪಟದಲ್ಲಿ ಇರಿಸುತ್ತವೆ ಎಂದು ಅವರು ಹೇಳಿದರು.
ಭೂಕಂಪ ಸಂಭವಿಸಿದಾಗ ನಾನು ದೆಹಲಿಯಲ್ಲಿದ್ದೆ. ಆದರೆ, ಮರುದಿನವೇ ಗುಜರಾತ್‌ಗೆ ಧಾವಿಸಿದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಸ್ಮರಿಸಿದರು. ವಿಪತ್ತು ನಿರ್ವಹಣಾ ಕಾಯ್ದೆಯನ್ನು ಪರಿಚಯಿಸಿದ ಮೊದಲ ರಾಜ್ಯ ಗುಜರಾತ್. ಇದು ನಂತರ ರಾಷ್ಟ್ರದ ಉಳಿದ ಭಾಗಗಳಲ್ಲೂ ಜಾರಿಗೆ ಕಾರಣವಾಗಿದೆ ಎಂದೂ ಹೇಳಿದರು.
ಜೊತೆಗೆ ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, 5 ಸಾವಿರ ಕೋಟಿ ರೂ.ಗಳ ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು. ತಾವು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸರ್ಹಾದ್ ಡೈರಿಯನ್ನು ಉದ್ಘಾಟಿಸಲಾಗಿತ್ತು ಎಂದು ಮೋದಿ ಸ್ಮರಿಸಿದರು. ಆಗ ಅದರ ಪ್ರತಿನಿತ್ಯ 1,400 ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಈಗ ಇದರ ಸಾಮರ್ಥ್ಯ ದಿನಕ್ಕೆ 5 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು, ಕಳೆದ 20 ವರ್ಷಗಳಲ್ಲಿ ಕಛ್ ಭಾಗದಲ್ಲಿ 45 ಹೊಸ ಕಾಲೇಜುಗಳು, 1,000 ಹೊಸ ಶಾಲೆಗಳು, 250 ಆಸ್ಪತ್ರೆಗಳು ಮತ್ತು ಸಾವಿರಾರು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಅಲ್ಲದೇ, ದೇಶದ ಮೊದಲ ಭೂಕಂಪ ನಿರೋಧಕ ಆಸ್ಪತ್ರೆಯೂ ಕಛ್ನಲ್ಲೇ ಇದೆ ಎಂದು ಮೋದಿ ತಿಳಿಸಿದರು.
ಇದನ್ನೂ ಓದಿ:ಗುಜರಾತ್ನ ಭುಜ್ ಭೂಕಂಪನ ಸ್ಮೃತಿ ವನ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ