ನವದೆಹಲಿ:ಮುಂಬರುವ ಐದು ವರ್ಷಗಳಲ್ಲಿ ಭಾರತವು ಆಟೋಮೊಬೈಲ್ ಉತ್ಪಾದನಾ ಕೇಂದ್ರದ ಹಬ್(ಪ್ರಮುಖ ಸ್ಥಳ) ಆಗಿ ಬದಲಾಗುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭವಿಷ್ಯ ನುಡಿದಿದ್ದಾರೆ.
"ಬಹುತೇಕ ಎಲ್ಲಾ ಪ್ರತಿಷ್ಠಿತ ಆಟೋಮೊಬೈಲ್ ಬ್ರಾಂಡ್‌ಗಳು ಭಾರತದಲ್ಲಿ ಇರುತ್ತವೆ. ಎಥೆನಾಲ್, ಮೆಥನಾಲ್, ಬಯೋ-ಡೀಸೆಲ್, ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ), ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ), ವಿದ್ಯುತ್ ಮತ್ತು ಗ್ರೀನ್ ಹೈಡ್ರೋಜನ್ ಒಳಗೊಂಡ ತಂತ್ರಜ್ಞಾನಗಳಲ್ಲಿ ನಾವು ಕೆಲಸ ಮಾಡುತ್ತಿದ್ದು ಮುಂದಿನ ಐದು ವರ್ಷಗಳಲ್ಲಿ ಭಾರತವು ಆಟೋಮೊಬೈಲ್ ಉತ್ಪಾದನಾ ಕೇಂದ್ರದ ಹಬ್ ಆಗಿ ಬದಲಾಗುತ್ತದೆ" ಎಂದರು.
ಹೊಸ ನೀತಿಯಡಿ ಹಳೆ ವಾಹನಗಳನ್ನು ಗುಜರಿ ಮಾಡುವುದನ್ನು ಅತ್ಯಂತ ವೈಜ್ಞಾನಿಕವಾಗಿ ಮಾಡಲಾಗುವುದು. ಇದರಲ್ಲಿ ಮರುಬಳಕೆ ಅಂಶವನ್ನು ಹೆಚ್ಚು ಕೇಂದ್ರೀಕರಿಸಲಾಗುತ್ತದೆ. ಜನರಿಗೆ ಪ್ರಕ್ರಿಯೆಗಳು ಸುಲಭವಾಗಿ ಸಿಗುವಂತಾಗಲು ಆರ್ಟಿಒ ವ್ಯವಸ್ಥೆಯನ್ನು ಸಹ ಸರಳಗೊಳಿಸಿ ಅನುಷ್ಠಾನ ಮಾಡಲಾಗುವುದು ಎಂದು ಹೇಳಿದರು.