ನವದೆಹಲಿ : ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಮೂರನೇ ಅವಧಿಯ ಭರವಸೆಗಳ ನೀಲನಕ್ಷೆಯನ್ನು ಪ್ರಸ್ತುತಪಡಿಸುವ ಸಂದರ್ಭದಲ್ಲಿ ಪ್ರಸ್ತುತಕ್ಕಿಂತ ವೇಗದ ಬೆಳವಣಿಗೆಯೊಂದಿಗೆ ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವನ್ನಾಗಿ ಮಾಡುವ ಭರವಸೆ ನೀಡಿದರು.
ಪ್ರಧಾನಿ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರವು ಮುಂದಿನ ವರ್ಷದ ಮೇ ತಿಂಗಳಲ್ಲಿ ತನ್ನ 10 ವರ್ಷಗಳನ್ನು ಪೂರೈಸಲಿದೆ. ಅಭಿವೃದ್ಧಿ ವಿಚಾರದಲ್ಲಿ ಮೂರನೇ ಅವಧಿಗೆ ಚುನಾವಣೆ ಎದುರಿಸಲು ಎನ್‌ಡಿಎ ಸಿದ್ಧತೆ ನಡೆಸುತ್ತಿದೆ. ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ನಾವು ಸಾಧಿಸಬೇಕಾಗಿದೆ ಎಂದು ಬುಧವಾರ ಅವರು ರಾಷ್ಟ್ರ ರಾಜಧಾನಿ ದೆಹಲಿಯ ಹೃದಯಭಾಗದಲ್ಲಿರುವ ವಿಶ್ವ ದರ್ಜೆಯ ಸಮಾವೇಶ ಕೇಂದ್ರ 'ಭಾರತ ಮಂಟಪ'ವನ್ನು ಉದ್ಘಾಟಿಸಿದ ನಂತರ ಹೇಳಿದರು.
ಪ್ರಗತಿ ಮೈದಾನದಲ್ಲಿ ಪುನರಾಭಿವೃದ್ಧಿಗೊಂಡ ಅಂತರರಾಷ್ಟ್ರೀಯ ಪ್ರದರ್ಶನ ಮತ್ತು ಕನ್ವೆನ್ಷನ್ ಸೆಂಟರ್ ಕಾಂಪ್ಲೆಕ್ಸ್ (ಐಇಸಿಸಿ) 'ಭಾರತ್ ಮಂಟಪ'ವನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ಭಾರತೀಯರು ತಮ್ಮ ಪ್ರಜಾಪ್ರಭುತ್ವಕ್ಕೆ ನೀಡಿದ ಸುಂದರ ಕೊಡುಗೆ ಎಂದು ಬಣ್ಣಿಸಿದರು.
ಬಳಿಕ, ನೀತಿ ಆಯೋಗದ ವರದಿಯನ್ನು ಉಲ್ಲೇಖಿಸಿದ ಅವರು, 13.5 ಕೋಟಿ ಬಡವರನ್ನು ಮೇಲೆತ್ತುವ ಮೂಲಕ ಭಾರತವು ಖಂಡಿತ ಬಡತನವನ್ನು ತೊಡೆದುಹಾಕಲಿದೆ. ತಮ್ಮ ಒಂಬತ್ತು ವರ್ಷಗಳ ಅವಧಿಯಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ, ರೈಲು ಮಾರ್ಗಗಳ ವಿದ್ಯುದೀಕರಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಅಂಕಿಅಂಶಗಳನ್ನು ನೀಡಿದ ಪ್ರಧಾನಿ, 2014 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಭಾರತವು 10ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಹೇಳಿದರು. ಯುಎಸ್, ಚೀನಾ, ಜರ್ಮನಿ ಮತ್ತು ಜಪಾನ್ ನಂತರ ದೇಶವು ಈಗ ವಿಶ್ವದಲ್ಲಿ ಐದನೇ ಸ್ಥಾನದಲ್ಲಿದೆ.