ನವದೆಹಲಿ :ಭಾರತ-ಅಮೆರಿಕ ನಡುವಿನ ಸಂಬಂಧಗಳು ದ್ವಿಪಕ್ಷೀಯ ವ್ಯಾಪ್ತಿಯನ್ನು ಮೀರಿ ಬೆಳೆದಿವೆ. ಜಾಗತಿಕ ಸಮಸ್ಯೆಗಳ ಮೇಲೂ ಉಭಯ ರಾಷ್ಟ್ರಗಳು ಪರಿಣಾಮ ಬೀರುವಷ್ಟು ಗಟ್ಟಿಯಾಗಿವೆ ಎಂದು ವಿದೇಶಾಂಗ ಸಚಿವ ಡಾ. ಜೈಶಂಕರ್ ಹೇಳಿದ್ದಾರೆ. ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಭಾರತ-ಅಮೆರಿಕ 2+2 ಸಚಿವರ ಸಂವಾದದಲ್ಲಿ ಮಾತನಾಡಿದ ಅವರು, ಉಭಯ ರಾಷ್ಟ್ರಗಳ ಸಹಭಾಗಿತ್ವವು ಜಾಗತಿಕವಾಗಿ ಮಹತ್ವ ಪಡೆದಿದೆ.
ಕೋವಿಡ್ ನಿಯಂತ್ರಣ, ಹವಾಮಾನ ಬದಲಾವಣೆ ಸವಾಲು, ಸಾಗರ ಸಂಬಂಧಗಳು, ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾರತ ಮತ್ತು ಯುಎಸ್ ಒಟ್ಟಾಗಿ ಏನು ಮಾಡುತ್ತವೆ ಎಂಬುದರ ಮೇಲೆ ಜಗತ್ತೇ ಕಣ್ಣು ನೆಟ್ಟಿರುತ್ತದೆ ಎಂದು ಹೇಳಿದ್ದಾರೆ. ಏತನ್ಮಧ್ಯೆ, ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವಲ್ಲಿ 2+2 ಸಭೆಗಳು ಪ್ರಮುಖ ಪಾತ್ರವನ್ನು ವಹಿಸಿವೆ ಎಂದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದರು.
ಇಂದಿನ ಚರ್ಚೆಗಳು ಹಿಂದಿನ ಸಭೆಗಳಿಗಿಂತಲೂ ಭಿನ್ನವಾಗಿದ್ದು, ಹೆಚ್ಚು ಫಲಪ್ರದವಾಗಿವೆ. ಇದು ಜಾಗತಿಕ ವ್ಯವಹಾರಗಳಲ್ಲಿ ಮಹತ್ವದ ಕ್ಷಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತದ ತಟಸ್ಥ ನಿಲುವು ತಳೆದಿದ್ದು, ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ವರ್ಚುಯಲ್ ಸಭೆ ನಡೆಸಿದ್ದರು.
ಈ ವೇಳೆ ಯುದ್ಧದ ಕುರಿತು ಚರ್ಚಿಸಲಾಗಿದೆ. ಅಲ್ಲದೇ, ಉಕ್ರೇನ್ನಲ್ಲಿನ ಪರಿಸ್ಥಿತಿಯು ಚಿಂತಾಜನಕವಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ನ ವೊಲೊಡಿಮಿರ್ ಝೆಲೆನ್ಸ್ಕಿ ಮಧ್ಯೆ ಮಾತುಕತೆಗಳು ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದರ ಬೆನ್ನಲ್ಲೇ ಇಂದು ಅಮೆರಿಕ ಮತ್ತು ಭಾರತದ ವಿದೇಶಾಂಗ ಸಚಿವರ ಮಧ್ಯೆ 2+2 ಸಭೆ ನಡೆದಿರುವುದು ಮಹತ್ವದ್ದಾಗಿದೆ.
ಓದಿ:ಕಾಶ್ಮೀರಿ ಪಂಡಿತ ಕುಟುಂಬದ ಭೇಟಿಗೆ ಮುಂದಾಗಿದ್ದ ಮುಫ್ತಿಗೆ ಗೃಹ ಬಂಧನ