ನವದೆಹಲಿ:ಮಹಾಮಾರಿ ಕೊರೊನಾ ವೈರಸ್ಗೆ ಭಾರತದಲ್ಲಿ ಎರಡು ಲಸಿಕೆ ಅಭಿವೃದ್ಧಿ ಮಾಡಲಾಗಿದ್ದು, ಈಗಾಗಲೇ ದೇಶದಲ್ಲಿ ವ್ಯಾಕ್ಸಿನ್ ನೀಡುವ ಪ್ರಕ್ರಿಯೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಓದಿ: ಸೋಮನಾಥ ದೇವಾಲಯ ಟ್ರಸ್ಟ್ನ ಅಧ್ಯಕ್ಷರಾಗಿ ಮೋದಿ: ಈ ಹುದ್ದೆ ಅಲಂಕರಿಸಿದ 2ನೇ ಪ್ರಧಾನಿ!
ಪಾಕಿಸ್ತಾನ ಹೊರತುಪಡಿಸಿ ನೆರೆಯ ರಾಷ್ಟ್ರಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ರಫ್ತು ಮಾಡಲು ಭಾರತ ನಿರ್ಧರಿಸಿದ್ದು, ಆಯಾ ದೇಶಗಳ ಅಗತ್ಯಕ್ಕೆ ಅನುಗುಣವಾಗಿ ವ್ಯಾಕ್ಸಿನ್ ನೀಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನೆರೆಯ ರಾಷ್ಟ್ರಗಳಾದ ಭೂತಾನ್, ಬಾಂಗ್ಲಾದೇಶ, ಮ್ಯಾನ್ಮಾರ್, ನೇಪಾಳಕ್ಕೆ ಕೋವಿಡ್ ಲಸಿಕೆ ರಫ್ತು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಪಟ್ಟಿಯಲ್ಲಿ ಪಾಕಿಸ್ತಾನವನ್ನ ಸೇರಿಸಿಲ್ಲ. ಲಸಿಕೆಗಾಗಿ ಪಾಕ್ನಿಂದ ಭಾರತಕ್ಕೆ ಯಾವುದೇ ಬೇಡಿಕೆ ಬಂದಿಲ್ಲ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ವಿದೇಶಾಂಗ ಸಚಿವಾಲಯ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಲಸಿಕೆ ರಫ್ತು ವಿಷಯದ ಬಗ್ಗೆ ಚರ್ಚೆ ನಡೆಸಿದ್ದು, ಇದರಲ್ಲಿ ಭಾರತ್ ಬಯೋಟೆಕ್ ಮತ್ತು ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಪ್ರತಿನಿಧಿಗಳು ಇದ್ದರು. ಕೊವ್ಯಾಕ್ಸಿನ್ ಲಸಿಕೆಯನ್ನ ಮಂಗೋಲಿಯಾ, ಒಮಾನ್, ಮ್ಯಾನ್ಮಾರ್,ಬಹ್ರೇನ್, ಫಿಲಿಪೈನ್ಸ್, ಮಾಲ್ಡೀವ್ಸ್ ಮತ್ತು ಮಾರಿಷನ್ಗೆ ರವಾನೆ ಮಾಡಲು ಹಾಗೂ ಕೊವಿಶೀಲ್ಡ್ ಆಫ್ಘಾನಿಸ್ತಾನ, ಭೂತಾನ್, ಬಾಂಗ್ಲಾದೇಶ, ನೇಪಾಳಗೆ ರಫ್ತು ಮಾಡಲು ನಿರ್ಧರಿಸಲಾಗಿದ್ದು, ಅಧಿಕೃತ ಆದೇಶಕ್ಕಾಗಿ ನಿರೀಕ್ಷೆ ಮಾಡಲಾಗುತ್ತಿದೆ ಎನ್ನಲಾಗಿದೆ.
ದೇಶದಲ್ಲಿ ವ್ಯಾಕ್ಸಿನ್ ಬಳಕೆಗಾಗಿ ಲಸಿಕೆ ಲಭ್ಯತೆ ಖಚಿತಪಡಿಸಿಕೊಂಡ ನಂತರ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಗತ್ಯವಿರುವ ದೇಶಗಳಿಗೆ ಅವಶ್ಯಕತೆಯಷ್ಟು ಲಸಿಕೆ ರಫ್ತು ಮಾಡಲಾಗುವುದು ಎಂದು ಅಧಿಕಾರಿವೋರ್ವರು ಮಾಹಿತಿ ನೀಡಿದ್ದಾರೆ.