ನವದೆಹಲಿ: ದೇಶದ ಪ್ರಮುಖ ವ್ಯೂಹಾತ್ಮಕ ಪೆಟ್ರೋಲಿಯಂ ಶೇಖರಣಾ ಕೇಂದ್ರಗಳಿಂದ 50 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಹೊರತೆಗೆಯಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಹೀಗಾಗಿ ಕೆಲ ದಿನಗಳಲ್ಲೇ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಅಗ್ಗ ಕಂಡುಬರುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದುಬಂದಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಂದು ದೆಹಲಿಯಲ್ಲಿ ಉನ್ನತ ಸಚಿವಾಲಯ ಮತ್ತು ತೈಲ ಮಾರುಕಟ್ಟೆ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಸದ್ಯ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ಗೆ 79 ಡಾಲರ್‌ಗೆ ಕುಸಿತಗೊಂಡಿದೆ. ಹೀಗಾಗಿ ತೈಲ ಸಂಗ್ರಹಾಗಾರದಲ್ಲಿನ ಕಚ್ಚಾತೈಲ ಹೊರತೆಗೆಯಲು ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಮೆರಿಕ, ಜಪಾನ್, ಆಸ್ಟ್ರೇಲಿಯಾ, ಚೀನಾ, ಜಪಾನ್ ಹಾಗೂ ದಕ್ಷಿಣ ಕೊರಿಯಾ ದೇಶಗಳ ಜೊತೆಗೂ ಚರ್ಚೆ ನಡೆಸಲಾಗಿದೆ. ಅದಕ್ಕೆ ಅನುಮತಿ ಸಿಕ್ಕಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ರಾಜ್ಯಗಳಿಗೆ 95,000 ಕೋಟಿ ರೂ. ತೆರಿಗೆ ಹಣ ಬಿಡುಗಡೆಗೊಳಿಸಿದ ಕೇಂದ್ರ: ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?
ಭಾರತದಲ್ಲಿ ಸದ್ಯ 26 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಸಂಗ್ರಹವಿದೆ. ಇದರಲ್ಲಿ 5 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ತೆಗೆದು ದೇಶದ ಜನರಿಗೆ ಬಳಕೆ ಮಾಡಲು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ನಿರ್ಧರಿಸಿದೆ. ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದಿಂದ ಬಿಡುಗಡೆ ಆಗುವ ಕಚ್ಚಾತೈಲವನ್ನು ಮಂಗಳೂರಿನ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ಗೆ ಮಾರಾಟ ಮಾಡಲಾಗುತ್ತದೆ. ಇದಾದ ಬಳಿಕ ಅಗತ್ಯವಿರುವ ಪ್ರದೇಶಗಳಿಗೆ ಇದರ ಸರಬರಾಜು ನಡೆಯಲಿದೆ.
ಈಗಾಗಲೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ ಕ್ರಮವಾಗಿ 5 ಮತ್ತು 10 ರೂ. ಕಡಿಮೆ ಮಾಡಿದ್ದು, ಅನೇಕ ರಾಜ್ಯಗಳು ಸಹ ತೈಲದ ಮೇಲಿನ ತೆರಿಗೆ ಕಡಿತಗೊಳಿಸಿವೆ.
ಏನಿದು ತೈಲ ಸಂಗ್ರಹಾಗಾರ?
ದೇಶಕ್ಕೆ ವಿಪತ್ತು ಉಂಟಾಗುವ ಸಂದರ್ಭದಲ್ಲಿ ತುರ್ತು ಬಳಕೆಗೆ ಕಚ್ಚಾತೈಲ ಸಂಗ್ರಹ ಮಾಡಲಾಗುತ್ತದೆ. ಪ್ರಮುಖವಾಗಿ ಆಂಧ್ರಪ್ರದೇಶ, ಕರ್ನಾಟಕದ ಮಂಗಳೂರು ಹಾಗೂ ಒಡಿಶಾದಲ್ಲಿ ತೈಲ ಸಂಗ್ರಹಾಗಾರಗಳಿವೆ. 2020ರಲ್ಲಿ ಭಾರತ ಪ್ರತಿ ಬ್ಯಾರೆಲ್ಗೆ $19 ಡಾಲರ್ ನೀಡಿ 5.3 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಖರೀದಿ ಮಾಡಿದೆ.