ಕರ್ನಾಟಕ

karnataka

ETV Bharat / bharat

ಇಂಡಿಯಾ ಅಂದರೆ ಭಾರತ.. ಬ್ರಿಟಿಷರು ಆಗಮಿಸುವ ಸಹಸ್ರಮಾನಗಳ ಮೊದಲೇ ಅಸ್ತಿತ್ವದಲ್ಲಿತ್ತು! - ಪ್ರೆಸಿಡೆಂಟ್​ ಆಫ್​ ಭಾರತ

ಇಂಡಿಯಾ ಎಂಬ ಹೆಸರಿನ ಬಗ್ಗೆ ಆಡಳಿತ ಪಕ್ಷಕ್ಕೆ ಯಾವುದೇ ಆಕ್ಷೇಪಣೆ ಇದ್ದರೆ, ಅದು 'ಭಾರತ' ಎಂಬ ಹೆಸರನ್ನು ಬಳಸಬಹುದು. ಆದರೆ, ಕೇಂದ್ರವು ಹೆಸರನ್ನು ಸಂಪೂರ್ಣವಾಗಿ ತೆಗೆದುಹಾಕಲು ನಿರ್ಧರಿಸಿದರೆ ಅದು ಸ್ವಾಗತಾರ್ಹವಲ್ಲ.

Etv Bharat
Etv Bharat

By ETV Bharat Karnataka Team

Published : Sep 7, 2023, 8:13 PM IST

Updated : Sep 7, 2023, 8:49 PM IST

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರಿನಲ್ಲಿ ಕೊಡಲಾದ ಜಿ-20 ಔತಣಕೂಟದ ಆಮಂತ್ರಣ ಪತ್ರಿಕೆಯಲ್ಲಿ 'ಪ್ರೆಸಿಡೆಂಟ್​ ಆಫ್​ ಇಂಡಿಯಾ' ಬದಲು 'ಪ್ರೆಸಿಡೆಂಟ್​ ಆಫ್​ ಭಾರತ' ಎಂಬ ಉಲ್ಲೇಖ ಹಾಗೂ ಪ್ರಧಾನಿ ಮೋದಿ ಅವರನ್ನು 'ಪ್ರೈಮ್ ಮಿನಿಸ್ಟರ್​ ಆಫ್​ ಭಾರತ' ಎಂದು ಆಸಿಯಾನ್‌ನ ಶೃಂಗಸಭೆಯ ಅಧಿಕೃತ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ಕೇಂದ್ರ ಸರ್ಕಾರ ದೇಶದ ಹೆಸರನ್ನು ಇಂಡಿಯಾದಿಂದ ಭಾರತ ಎಂದು ಬದಲಾಯಿಸಲು ಹೊರಟಿದೆ ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬ್ರಿಟಿಷರೇ ದೇಶಕ್ಕೆ 'ಇಂಡಿಯಾ' ಎಂದು ಹೆಸರಿಟ್ಟಿದ್ದು, ಆ ಹೆಸರೇ ವಸಾಹತುಶಾಹಿ ಅವಶೇಷ ಎಂಬ ಅಭಿಪ್ರಾಯ ವ್ಯಾಪಕವಾಗಿ ಪ್ರಚಾರವಾಗುತ್ತಿದೆ.

ಚರಿತ್ರೆ ಎಂದರೆ ಯಾರೋ ಕೆಲ ಸಾಂಪ್ರದಾಯಿಕ ವ್ಯಕ್ತಿಗಳು ವ್ಯಕ್ತಪಡಿಸುವ ಸಂಪ್ರದಾಯವಾದಿ ಅಭಿಪ್ರಾಯಗಳ ಮಿಶ್ರಣವಲ್ಲ. ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳು, ಶಾಸನದ ಪುರಾವೆಗಳು, ನಾಣ್ಯಶಾಸ್ತ್ರ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪುರಾವೆಗಳಿಂದ ಹೊರಹೊಮ್ಮುವ ಸತ್ಯಗಳ ಕ್ರಮಬದ್ಧವಾದ ವಿಶ್ಲೇಷಣೆಯ ಫಲಿತಾಂಶ. ನಮ್ಮ ದೇಶದ 'ಇಂಡಿಯಾ' ಎಂಬ ಹೆಸರಿನ ಬಗ್ಗೆ ನಕಾರಾತ್ಮಕ ಪ್ರಚಾರದ ನಡುವೆ ನಮ್ಮ ಸಾಮೂಹಿಕ ಗತಕಾಲದ ಸಿಂಹಾವಲೋಕನ ಮಾಡುವುದು ಅತ್ಯಗತ್ಯ.

ಸಿಂಧೂ ಕಣಿವೆಯ ನಾಗರಿಕತೆಯು ಪ್ರಪಂಚದ ಮೂರು ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿದೆ. 'ಇಂಡಿಯಾ' ಎಂಬ ಹೆಸರಿನ ಬೇರುಗಳು ಕ್ರಿ.ಪೂ. 3 ಸಾವಿರ ವರ್ಷಗಳ ಹಿಂದೆ ಪ್ರವರ್ಧಮಾನಕ್ಕೆ ಬಂದ ನಾಗರಿಕತೆಯಲ್ಲಿದೆ. 'S' ಶಬ್ದದಿಂದ ಪ್ರಾರಂಭವಾಗುವ ಪದ ಅವರ ಭಾಷೆಯಲ್ಲಿ ಅಪರೂಪವಾಗಿದ್ದರಿಂದ ಪ್ರಾಚೀನ ಪರ್ಷಿಯನ್ನರು ಸಿಂಧ್ ನದಿಯನ್ನು ಹಿಂದ್ ಎಂದು ಉಚ್ಚರಿಸಿದರು. ಗ್ರೀಕರು ಇದನ್ನು 'ಇಂಡಸ್' ಎಂದು ಉಚ್ಚರಿಸಿದರು. ಕ್ರಿ.ಪೂ 440ರ ಸುಮಾರಿಗೆ ಗ್ರೀಕ್ ಇತಿಹಾಸಕಾರ ಹೆರೊಡೋಟಸ್ ಸಿಂಧೂ ನೀರಿನಿಂದ ಮುಳುಗಿದ ಭೂಮಿಯನ್ನು 'ಹೆ ಹಿಂದಿಕೆ ಚೋರೆ' ಅಂದರೆ ಸಿಂಧೂ ಭೂಮಿ ಎಂದು ಕರೆದರು.

ಭಾರತದ ಇತಿಹಾಸದ ಪಿತಾಮಹ ಎಂದೇ ಜನಪ್ರಿಯರಾದ ಗ್ರೀಕ್​ನ ಮೆಗಾಸ್ತನೀಸ್ ಅವರು ಕ್ರಿ.ಪೂ 300ರಲ್ಲಿ ತಮ್ಮ ಕೃತಿಗೆ 'ಇಂಡಿಕಾ' ಎಂದು ಹೆಸರಿಸಿದ್ದರು. ಆ ಕಾಲದಲ್ಲಿ ಬ್ರಿಟನ್ ಎಂಬ ದೇಶ ಇರಲಿಲ್ಲ. ಯುನೈಟೆಡ್ ಕಿಂಗ್‌ಡಮ್ ಆಫ್ ಗ್ರೇಟ್ ಬ್ರಿಟನ್ ಅಸ್ತಿತ್ವಕ್ಕೆ ಬಂದ ನಂತರ ಬ್ರಿಟಿಷರು ಎಂಬ ಪದವು ಕ್ರಿ.ಶ.1707ಯಲ್ಲಿ ಜನಪ್ರಿಯವಾಯಿತು. ಇದು ಸತ್ಯವಾಗಿರುವಾಗ ನಮ್ಮ ದೇಶಕ್ಕೆ 'ಇಂಡಿಯಾ' ಎಂದು ನಾಮಕರಣ ಮಾಡಿದ ಶ್ರೇಯಸ್ಸು ಬ್ರಿಟಿಷರಿಗೆ ಹೇಗೆ ಕೊಡಲು ಸಾಧ್ಯ?.

ಆಂಗ್ಲರು ಇಲ್ಲಿಗೆ ಆಗಮಿಸುವ ಮೊದಲು ಕನಿಷ್ಠ 2,000 ವರ್ಷಗಳ ಕಾಲ ಈ ಭೂಮಿ 'ಇಂಡಿಯಾ' ಎಂದು ಜಾಗತಿಕವಾಗಿ ಜನಪ್ರಿಯವಾಗಿತ್ತು. 'ಇಂಡಿಯಾ' ಒಂದು ದೇಶವಾಗಿ ಭವ್ಯವಾದ ಇತಿಹಾಸವನ್ನು ಹೊಂದಿದೆ. ಇಡೀ ರಾಷ್ಟ್ರವೇ ಹೆಮ್ಮೆ ಪಡುವ ಸಿಂಧೂ ಕಣಿವೆ ನಾಗರಿಕತೆಯಲ್ಲಿ ಬೇರೂರಿರುವ 'ಇಂಡಿಯಾ' ಎಂಬ ಹೆಸರು 140 ಕೋಟಿ ಜನರ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಪ್ರತೀಕವಾಗಿದೆ.

'ಭಾರತ್' ಪದವು ಸೇತು ಹಿಮಾಚಲಂನೊಂದಿಗೆ ಹೇಗೆ ಸಂಬಂಧಿಸಿದೆ ಎಂಬುದು ತುಂಬಾ ಆಸಕ್ತಿದಾಯಕವಾಗಿದೆ. ಭರತ ಎಂಬ ಪದವನ್ನು ಋಗ್ವೇದ ಕಾಲದಲ್ಲಿ ಜನರ ಕುಲಕ್ಕೆ ಬಳಸಲಾಗುತ್ತಿತ್ತು. ಹತ್ತು ರಾಜರ ಋಗ್ವೇದ ಯುದ್ಧದಲ್ಲಿ ವಿಜೇತನಾದ ರಾಜ ಸುದಾಸನು ಭರತ ಕುಲಕ್ಕೆ ಸೇರಿದವನು. ಭರತರೊಂದಿಗೆ ಪುರು, ಯದು, ತುರ್ವಾಸ ಮೊದಲಾದ ಕುಲಗಳೂ ಆ ಕಾಲದಲ್ಲಿ ಇದ್ದವು.

ಮಹಾನ್ ಮಹಾಕಾವ್ಯವಾದ ಮಹಾಭಾರತ ಮತ್ತು ವಿಷ್ಣು ಪುರಾಣದಲ್ಲಿ ಒಂದು ಪ್ರದೇಶವನ್ನು ಸೂಚಿಸಲು 'ಭರತ ಭೂಮಿ' ಮತ್ತು 'ಭರತ ವರ್ಷ' ಮುಂತಾದ ಪದಗಳನ್ನು ಬಳಸಿರುವುದನ್ನು ನಾವು ನೋಡುತ್ತೇವೆ. ಐತಿಹಾಸಿಕವಾಗಿ ಹೇಳುವುದಾದರೆ, ಒರಿಸ್ಸಾ ರಾಜಧಾನಿ ಭುವನೇಶ್ವರದ ಬಳಿ ಕಂಡುಬರುವ ಜನಪ್ರಿಯ ಹಾಥಿ ಗುಂಫಾ ಶಾಸನದಲ್ಲಿ 'ಭರತ ವರ್ಷ' ಎಂಬ ಪದವನ್ನು ಬಳಸಲಾಗಿದೆ.

ಪ್ರಾಚೀನ ಕಳಿಂಗ ರಾಜ ಖಾರವೇಲನ ಹೆಸರಿನಲ್ಲಿ ಕೆತ್ತಲಾದ ಶಾಸನವು ಖಾರವೇಲನು 'ಭರತ ವರ್ಷ'ವನ್ನು ಆಕ್ರಮಿಸಲು ತನ್ನ ಸೈನ್ಯವನ್ನು ಕಳುಹಿಸಿದನು ಎಂದು ಹೇಳುತ್ತದೆ. ಅದರ ಪ್ರಕಾರ, 'ಭಾರತ ವರ್ಷ' ಗಂಗಾ ಬಯಲು ಪ್ರದೇಶವನ್ನು ಒಳಗೊಂಡಿರುವ ಭೌಗೋಳಿಕ ಪ್ರದೇಶವಾಗಿತ್ತು. ಅಂತೆಯೇ, 'ಭರತ ವರ್ಷ' ಎಂಬ ಪದವು ಖಾರವೇಲನ ಮೂಲಕ ಐತಿಹಾಸಿಕ ಶಾಸನಗಳಲ್ಲಿ ಕ್ರಿ.ಪೂ. 2ನೇ ಶತಮಾನ ಮತ್ತು ಕ್ರಿ.ಶ. 1ನೇ ಶತಮಾನದ ನಡುವೆ ಎಲ್ಲೋ ಪ್ರವೇಶಿಸಿತು. ಅದಕ್ಕೂ ಬಹಳ ಹಿಂದೆಯೇ ಗ್ರೀಕ್ ಇತಿಹಾಸಕಾರರ ಕೃತಿಗಳ ಮೂಲಕ 'ಇಂಡಿಯಾ' ಎಂಬ ಹೆಸರು ಇತರ ದೇಶಗಳಲ್ಲಿ ಜನಪ್ರಿಯವಾಗಿತ್ತು.

ಜವಾಹರಲಾಲ್ ನೆಹರು ಅವರು ತಮ್ಮ ಡಿಸ್ಕವರಿ ಆಫ್ ಇಂಡಿಯಾದಲ್ಲಿ 'ನಾನು ಸಭೆಯಿಂದ ಸಭೆಗೆ ಹೋಗುವಾಗ ನಮ್ಮ ಇಂಡಿಯಾ, ಹಿಂದೂಸ್ತಾನ್ ಮತ್ತು ಪೌರಾಣಿಕ ಸ್ಥಾಪಕರಿಂದ ಪಡೆದ ಹಳೆಯ ಸಂಸ್ಕೃತದ ಹೆಸರು ಭರತದ ನನ್ನ ಸಭಿಕರೊಂದಿಗೆ ಮಾತನಾಡಿದೆ' ಎಂದು ಬರೆದಿದ್ದಾರೆ. ನೆಹರು ಅವರು ತಮ್ಮ ಕೃತಿಯಲ್ಲಿ ದೇಶದ ಎಲ್ಲ ಮೂರು ಹೆಸರುಗಳಾದ ಭಾರತ, ಹಿಂದೂಸ್ತಾನ್ ಮತ್ತು ಇಂಡಿಯಾ ಎಂದು ಉಲ್ಲೇಖಿಸಿದ್ದಾರೆ.

ಸಂವಿಧಾನದ ಮೊದಲ ಪರಿಚ್ಛೇದದಲ್ಲಿ ರಚನಾಕಾರರು "ಇಂಡಿಯಾ ಎಂದರೆ ಭಾರತ..." ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಆದ್ದರಿಂದ ದೇಶದ ಹೆಸರಿನ ಮೇಲೆ ವಿವಾದವನ್ನು ಎಬ್ಬಿಸಿರುವುದು ಅತ್ಯಂತ ದುರದೃಷ್ಟಕರ. ಇಂಡಿಯಾ ಎಂಬ ಹೆಸರಿನ ಬಗ್ಗೆ ಆಡಳಿತ ಪಕ್ಷಕ್ಕೆ ಯಾವುದೇ ಆಕ್ಷೇಪಣೆ ಇದ್ದರೆ, ಅದು 'ಭಾರತ' ಎಂಬ ಹೆಸರನ್ನು ಬಳಸಬಹುದು. ಅದರಲ್ಲಿ ಯಾವುದೇ ಸಮಸ್ಯೆ ಇರದು. ಆದರೆ, ಕೇಂದ್ರವು ಹೆಸರನ್ನು ಸಂಪೂರ್ಣವಾಗಿ ತೆಗೆದುಹಾಕಲು ನಿರ್ಧರಿಸಿದರೆ ಅದು ಸ್ವಾಗತಾರ್ಹವಲ್ಲ.

ಮುಂಬರುವ ಚುನಾವಣೆಯಲ್ಲಿ ಅಧಿಕಾರದ ಮೊಸರು ಕುಡಿಕೆ ಹೊಡೆಯುವ ಸಂಕಲ್ಪ ತೊಟ್ಟಿರುವ ವಿರೋಧ ಪಕ್ಷಗಳು ಸಾಕಷ್ಟು ಚರ್ಚೆಯ ನಂತರ ತಮ್ಮ ಮೈತ್ರಿಕೂಟಕ್ಕೆ 'ಇಂಡಿಯಾ' ಎಂದು ಹೆಸರಿಟ್ಟಿವೆ. 'ಇಂಡಿಯಾ' ಎಂಬ ಹೆಸರನ್ನು ಮರೆತುಬಿಡೋಣ ಎಂದು ಹೇಳುತ್ತಿರುವ ಆಡಳಿತ ಪಕ್ಷದ ಬೆಂಬಲಿಗರು ತಮ್ಮ ನಿಲುವಿನ ಹಿಂದೆ ಪ್ರತಿಪಕ್ಷಗಳ ಮೇಲೆ ದಂಡೆತ್ತಿ ಹೋಗುತ್ತಿರುವುದೇ ಹೊರತು ಬೇರೆ ಉದ್ದೇಶವಲ್ಲ.

ಜಿ20 ಶೃಂಗಸಭೆಗಾಗಿ ಜಾಗತಿಕ ನಾಯಕರು ದೆಹಲಿಯಲ್ಲಿ ಸೇರುತ್ತಿರುವ ಸಂದರ್ಭದಲ್ಲಿ ಇಂತಹ ಅನಗತ್ಯ ವಿವಾದಗಳಿಂದಾಗಿ ದೇಶದ ಪ್ರತಿಷ್ಠೆಗೆ ಹೊಡೆತ ಬೀಳುವುದಿಲ್ಲವೇ?. ಸಂಸತ್ತಿನ ವಿಶೇಷ ಅಧಿವೇಶನವು ದೇಶದ ಮರುನಾಮಕರಣಕ್ಕಾಗಿ ಮಾತ್ರ ಉದ್ದೇಶಿಸಿದ್ದರೆ, ಈ ವಿಷಯದ ಮೇಲಿನ ವಾದಗಳು ಮತ್ತು ಪ್ರತಿವಾದಗಳು ದೇಶದ ವರ್ಚಸ್ಸು ಮತ್ತು ಅದರ ಪ್ರಜಾಪ್ರಭುತ್ವದ ಪರಿಪಕ್ವತೆಯ ಮೇಲೆ ಕರಿನೆರಳು ಬೀಳುವುದಿಲ್ಲವೇ?, ಇಂಡಿಯಾ ಎಂಬ ಹೆಸರು ನಮ್ಮ ದೇಶವಾಸಿಗಳ ಭಾವನೆಗಳೊಂದಿಗೆ ಹೆಣೆದುಕೊಂಡಿದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳುವ ಸಮಯ ಬಂದಿದೆ.

ವಿಕಾಸ್ ಭಾರತ್ (ಅಭಿವೃದ್ಧಿ ಹೊಂದಿದ ಭಾರತ) ಸಾಧಿಸಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ 'ಟೀಂ ಇಂಡಿಯಾ' ಆಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಎಲ್ಲರೂ ಒಟ್ಟಾಗಿ ಪ್ರಗತಿಪರ ನೀತಿಗಳತ್ತ ಗಮನ ಹರಿಸಬೇಕು ಎಂಬುದು ಪ್ರಧಾನಿಯವರ ಸಂದೇಶದ ತಿರುಳು. ಆದ್ದರಿಂದ ದೇಶವನ್ನು ಮರುನಾಮಕರಣ ಮಾಡುವ ಯಾವುದೇ ಆತುರವು 'ಟೀಂ ಇಂಡಿಯಾ'ದ ಉತ್ಸಾಹಕ್ಕೆ ಹೊಡೆತ ನೀಡುತ್ತದೆ. ಅಂತಹ ಪ್ರಚೋದಕ ಆತುರವು ನಿಜವಾಗಿಯೂ ಬೇಕಾಗಿಲ್ಲ. (ಸೆಪ್ಟೆಂಬರ್ 7ರ ಆವೃತ್ತಿಯಲ್ಲಿ ಪ್ರಕಟವಾದ ಈನಾಡು ಸಂಪಾದಕೀಯ)

Last Updated : Sep 7, 2023, 8:49 PM IST

ABOUT THE AUTHOR

...view details