ನವದೆಹಲಿ:ಖಲಿಸ್ತಾನಿಗಳ ಉಪಟಳ ಮಿತಿಮೀರಿದೆ. ಪ್ರತ್ಯೇಕತಾವಾದಿ ಸಂಘಟನೆಯ ಬೆಂಬಲಿಗರು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿರುವ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದಾರೆ. ಆ ಬಳಿಕ ಖಲಿಸ್ತಾನ್ ಧ್ವಜ ಹಾರಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತ ಸರ್ಕಾರವು ನವದೆಹಲಿಯಲ್ಲಿರುವ ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್ ಕರೆಸಿಕೊಂಡು ಭದ್ರತಾ ಲೋಪದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ವಿವರಣೆ ಕೇಳಿದೆ.
ಬ್ರಿಟನ್‌ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ಮತ್ತು ಸಿಬ್ಬಂದಿಯ ಭದ್ರತೆಗೆ ಯುಕೆ ಸರ್ಕಾರದ ಉದಾಸೀನತೆ ತೋರಿಸಿರುವುದನ್ನು ಭಾರತ ಖಂಡಿಸಿದೆ. ಭದ್ರತಾ ಲೋಪ ''ಸ್ವೀಕಾರಾರ್ಹವಲ್ಲ'' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ. ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ದೆಹಲಿಯಿಂದ ಹೊರಗಿರುವ ಕಾರಣ, ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಕ್ರಿಸ್ಟಿನಾ ಸ್ಕಾಟ್ ಅವರನ್ನು ಸಚಿವಾಲಯಕ್ಕೆ ಕರೆಸಿ ಘಟನೆ ಬಗ್ಗೆ ವಿವರಣೆ ಕೇಳಲಾಗಿದೆ.
ಕಠಿಣ ಕ್ರಮಕ್ಕೆ ಒತ್ತಾಯ:ವಿಯೆನ್ನಾ ಒಪ್ಪಂದದ ಅಡಿಯಲ್ಲಿ ಯುಕೆ ಸರ್ಕಾರದ ಮೂಲಭೂತ ಜವಾಬ್ದಾರಿಗಳನ್ನು ರಾಜತಾಂತ್ರಿಕ ಅಧಿಕಾರಿಗೆ ನೆನಪಿಸಲಾಗಿದೆ. ಭಾರತೀಯ ರಾಜತಾಂತ್ರಿಕ ಕಚೇರಿ ಆವರಣ ಮತ್ತು ಸಿಬ್ಬಂದಿಯ ಭದ್ರತೆಗೆ ಸರ್ಕಾರ ಉದಾಸೀನತೆ ಪ್ರದರ್ಶಿಸಿದೆ. ಇದು ಸ್ವೀಕಾರಾರ್ಹವಲ್ಲ ಎಂದು ಎಂಇಎ ಕಠಿಣ ಪದಗಳಲ್ಲಿ ತಿಳಿಸಿದೆ. ಘಟನೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಿ ಬಂಧಿಸಬೇಕು. ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದು ಭಾರತ ಒತ್ತಾಯಿಸಿದೆ.