ಬಾಲಾಸೋರೆ(ಒಡಿಶಾ):ಸ್ವದೇಶಿ ನಿರ್ಮಿತ ಮೇಲ್ಮೈಯಿಂದ ಮೇಲ್ಮೈಗೆ ಹಾರುವ ಖಂಡಾಂತರ 'ಪ್ರಳಯ್' ಕ್ಷಿಪಣಿಯನ್ನು ಒಡಿಶಾದ ಬಾಲೇಶ್ವರದಲ್ಲಿರುವ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಇಂದು ಬೆಳಗ್ಗೆ ಪರೀಕ್ಷಾರ್ಥ ಯಶಸ್ವಿ ಉಡಾವಣೆ ಮಾಡಲಾಯಿತು.
ಪ್ರಳಯ್ ಖಂಡಾಂತರ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದ್ದು, ಕ್ಷಿಪಣಿ ಸೀಮಿತ ದೂರ ತಲುಪಲಿದೆ. ಅಲ್ಲದೇ, ಮೇಲ್ಮೈನಿಂದ ಮೇಲ್ಮೈಗೆ(ಆಕಾಶದಿಂದ ಆಕಾಶಕ್ಕೆ) ಉಡ್ಡಯನ ಮಾಡಬಹುದಾಗಿದೆ. ಇದು ಅತ್ಯಂತ ನಿಖರತೆಯೊಂದಿಗೆ ನಿಗದಿತ ಗುರಿ ತಲುಪಿದೆ ಎಂದು ಡಿಆರ್ಡಿಒ ಅಧಿಕಾರಿಗಳು ತಿಳಿಸಿದ್ದಾರೆ.
ಘನ ಮತ್ತು ಇಂಧನ ರೂಪದ 500 ರಿಂದ 1,000 ಕೆ.ಜಿ. ಸಿಡಿತಲೆಗಳನ್ನು ಹೊತ್ತು ಸಾಗಬಲ್ಲ ಸಾಮರ್ಥ್ಯ ಇರುವ ಈ ಕ್ಷಿಪಣಿ, 350- 500 ಕಿಮೀ ವ್ಯಾಪ್ತಿಯಲ್ಲಿನ ಗುರಿಗಳನ್ನು ಭೇದಿಸಬಲ್ಲದು. ಯುದ್ಧಭೂಮಿ ಕ್ಷಿಪಣಿಯಾದ ಪ್ರಳಯ್ ಬ್ಯಾಲಿಸ್ಟಿಕ್ ಕ್ಷಿಪಣಿಗಳಾದ ಪೃಥ್ವಿ ಡಿಫೆನ್ಸ್ ವೆಹಿಕಲ್ ಆಧರಿಸಿದೆ. ಬುಧವಾರ ನಡೆಸಿದ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ಮುಗಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.