ಭುವನೇಶ್ವರ (ಒಡಿಶಾ):ದೇಶದ ರಕ್ಷಣಾ ವಲಯ ದಿನದಿಂದ ದಿನಕ್ಕೆ ಮತ್ತಷ್ಟು ಬಲಿಷ್ಠವಾಗುತ್ತಿದ್ದು, ಒಡಿಶಾದ ಬಾಲಸೋರ್ ಕರಾವಳಿಯಲ್ಲಿ ತ್ವರಿತವಾಗಿ ಪ್ರತಿಕ್ರಿಯೆ ನೀಡುವ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ (ಕ್ಯೂಆರ್‌ಎಸ್‌ಎಎಂ) ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ನಿರ್ವಹಿಸಿದೆ.
ಪರೀಕ್ಷೆಯ ಸಮಯದಲ್ಲಿ ಕ್ಷಿಪಣಿ ನೇರವಾಗಿ ತನ್ನ ಗುರಿಯನ್ನು ಮುಟ್ಟಿದ್ದು, ಪೈಲೆಟ್ ರಹಿತ ವಿಮಾನವನ್ನು ಮಧ್ಯಮ ವ್ಯಾಪ್ತಿಯಲ್ಲಿ ಕರಾರುವಕ್ಕಾಗಿ ಹೊಡೆದುರುಳಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಸಂಯೋಜಿತ ಪರೀಕ್ಷಾ ಶ್ರೇಣಿ (ಐಟಿಆರ್), ಉಪಕರಣಗಳ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಐಆರ್ಡಿಇ) ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದವು.
ಕ್ಯೂಆರ್‌ಎಸ್‌ಎಎಂ ಕ್ಷಿಪಣಿಯನ್ನು ಚಲಿಸುವ ಶತ್ರು ವಿಮಾನಗಳನ್ನು ಪತ್ತೆ ಹಚ್ಚಿ, ಹೊಡೆದುರುಳಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಈ ಕ್ಷಿಪಣಿಯನ್ನು ಮೊಬೈಲ್ ಲಾಂಚರ್ ಬಳಸಿ ಉಡಾಯಿಸಬಹುದು.
ಕ್ಯೂಆರ್‌ಎಸ್‌ಎಎಂ ವ್ಯವಸ್ಥೆಯನ್ನು ಡಿಆರ್‌ಡಿಒ ಜೊತೆಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಭಾರತೀಯ ಸೈನ್ಯಕ್ಕಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ವಿನ್ಯಾಸಗೊಳಿಸಿದೆ. ಇನ್ನೂ ಹೊಸ ಸಂಶೋಧನೆಗಳು ನಡೆಯುತ್ತಿವೆ.