ನವದೆಹಲಿ:ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯ ಆಗಸದಲ್ಲಿ ಉಡಾಯಿಸಬಹುದಾದ ಆವೃತ್ತಿಯನ್ನು ಒಡಿಶಾ ಕರಾವಳಿಯ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಸೂಪರ್‌ಸಾನಿಕ್ ಯುದ್ಧ ವಿಮಾನ ಸುಖೋಯ್ 30 MK-I ಮೂಲಕ ಬುಧವಾರ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ಈ ಯುದ್ಧ ವಿಮಾನದಿಂದ ಉಡಾವಣೆಯಾದ ಕ್ಷಿಪಣಿಯು ಯೋಜನೆಯ ಉದ್ದೇಶಗಳನ್ನು ಪೂರೈಸಿದೆ ಎಂದು ರಕ್ಷಣಾ ಸಚಿವಾಲಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಕ್ಷಿಪಣಿಯನ್ನು ಯಶಸ್ವಿಯಾಗಿಸಿದ್ದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಭಾರತೀಯ ವಾಯುಪಡೆಯನ್ನು ಶ್ಲಾಘಿಸಿದ್ದಾರೆ.
ರಕ್ಷಣಾ ಸಚಿವಾಲಯದ ಪ್ರಕಾರ, ಈ ಪರೀಕ್ಷೆಯು ಬ್ರಹ್ಮೋಸ್ ಅಭಿವೃದ್ಧಿಯಲ್ಲಿ ಪ್ರಮುಖ ಮೈಲಿಗಲ್ಲು. ಈ ಕ್ಷಿಪಣಿ ಪರೀಕ್ಷೆಯ ಯಶಸ್ಸಿನಿಂದಾಗಿ ದೇಶದಲ್ಲಿ ಆಕಾಶದಲ್ಲಿ ಉಡಾಯಿಸಬಹುದಾದ ಬ್ರಹ್ಮೋಸ್ ಕ್ಷಿಪಣಿಗಳ ಉತ್ಪಾದನೆ ಮಾಡಿ, ರಫ್ತು ಮಾಡಬಹುದಾಗಿದೆ. ಇದರ ಜೊತೆಗೆ, ದೇಶದ ರಕ್ಷಣೆಯಲ್ಲೂ ಇದು ಪ್ರಮುಖ ಪಾತ್ರ ವಹಿಸಲಿದೆ.