ನವದೆಹಲಿ :ದೇಶದಲ್ಲಿ ಬೇಸಿಗೆ ಹೆಚ್ಚಾದಂತೆ ವಿದ್ಯುತ್ ಬೇಡಿಕೆಯೂ ಅಧಿಕವಾಗಿವೆ. ಈ ನಡುವೆ 150ಕ್ಕೂ ಹೆಚ್ಚು ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದ್ದು, ವಿದ್ಯುತ್ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ. 173 ವಿದ್ಯುತ್ ಸ್ಥಾವರಗಳಲ್ಲಿ ಏ.21ಕ್ಕೆ 66.32 ಮಿಲಿಯನ್ ಟನ್ ಕಲ್ಲಿದ್ದಲು ಸಂಗ್ರಹ ಇರಬೇಕಿತ್ತು. ಆದರೆ, ಪ್ರಸ್ತುತ 21.93 ಮಿಲಿಯನ್ ಟನ್‌ಗಳಷ್ಟು ಮಾತ್ರ ಕಲ್ಲಿದ್ದಲು ದಾಸ್ತಾನು ಇದೆ.
ಕಲ್ಲಿದ್ದಲು ಅಭಾವದಿಂದ ಕಳೆದ ಎಂಟು ವರ್ಷಗಳಲ್ಲೇ ಅಧಿಕವಾದ ವಿದ್ಯುತ್ ಕ್ಷಾಮ ಉದ್ಭವಿಸುವ ಲಕ್ಷಣಗಳು ಕಾಣುತ್ತಿವೆ. ಕೇಂದ್ರ ಸರ್ಕಾರದ ನಿಯಮದ ಪ್ರಕಾರವೇ ಆರ್ಥಿಕ ವರ್ಷದ ಆರಂಭದಲ್ಲಿ 24 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ಕಡ್ಡಾಯವಾಗಿ ದಾಸ್ತಾನು ಇರಬೇಕಿತ್ತು. ಆದರೆ, ಸದ್ಯ ಕೇವಲ 9 ದಿನಗಳಷ್ಟು ಕಲ್ಲಿದ್ದಲು ಸಂಗ್ರಹ ಇದ್ದು, 2014ರ ಆರ್ಥಿಕ ವರ್ಷದ ನಂತರ ಅತಂತ್ಯ ಕಡಿಮೆ ದಾಸ್ತಾನು ಇದಾಗಿದೆ ಎಂದು ಹೇಳಲಾಗುತ್ತಿದೆ.
150 ಸರ್ಕಾರಿ ಸ್ವಾಮ್ಯದ ವಿದ್ಯುತ್ ಸ್ಥಾವರಗಳಲ್ಲಿ ಪೈಕಿ 81 ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹವು ನಿರ್ಣಾಯಕವಾಗಿದೆ. ಮತ್ತೊಂದೆಡೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಲೇ ಇದೆ. 2019ರಲ್ಲಿ 106.6 ಶತಕೋಟಿ ಯೂನಿಟ್ (ಬಿಲಿಯನ್ ಯೂನಿಟ್) ಬೇಡಿಕೆ ಇತ್ತು. ಇದು 2021ರಲ್ಲಿ 124.2 ಬಿಲಿಯನ್ ಯೂನಿಟ್ ಮತ್ತು 2022ರಲ್ಲಿ 132 ಬಿಲಿಯನ್ ಯೂನಿಟ್ಗೆ ಹೆಚ್ಚಾಗಿದೆ.
ಕಲ್ಲಿದ್ದಲು ಕೊರತೆ ಇದ್ದರೂ ಪರಿಸ್ಥಿತಿಯನ್ನು ನಿಭಾಯಿಸಬಹುದಿತ್ತು. ಆದರೆ, ಬೇಸಿಗೆ ಆರಂಭದಲ್ಲೇ ಉಷ್ಣಾಂಶ ಅಧಿಕವಾಗಿದ್ದರಿಂದ ವಿದ್ಯುತ್ ಬೇಡಿಕೆಯಲ್ಲಿ ಘಾತೀಯವಾಗಿ ಹೆಚ್ಚಾಗಿದೆ. ಇದು ಬೇಡಿಕೆ-ಪೂರೈಕೆ ಅಂತರವನ್ನೂ ಹೆಚ್ಚಿಸಿದೆ ಎಂದು ವಿದ್ಯುತ್ ವಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇತ್ತ, ಕಡಿಮೆ ಕಲ್ಲಿದ್ದಲು ದಾಸ್ತಾನು ನಡುವೆ ಪಂಜಾಬ್, ಉತ್ತರಪ್ರದೇಶ, ಮಹಾರಾಷ್ಟ್ರ, ಹರಿಯಾಣ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳು ವಿದ್ಯುತ್ ಕಡಿತಕ್ಕೆ ಸಾಕ್ಷಿಯಾಗುತ್ತಿವೆ. ಇನ್ನೊಂಡೆಡೆ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯ ರೈಲ್ವೆ ರೇಕ್‌ಗಳ ಸಮಸ್ಯೆಯೂ ಇದೆ. ಇದರಿಂದಲೂ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಮತ್ತಷ್ಟು ಹೆಚ್ಚಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಆಂಧ್ರಪ್ರದೇಶದಲ್ಲಿ ವಿದ್ಯುತ್ ಅಭಾವ: 'ಪವರ್ ಹಾಲಿಡೇ' ಘೋಷಿಸಿದ ಸರ್ಕಾರ