ನವದೆಹಲಿ:ನೇಪಾಳದಲ್ಲಿ ಪ್ರಬಲ ಭೂಕಂಪದಿಂದ ಉಂಟಾದ ಜೀವ ಹಾನಿ ಮತ್ತು ಅಪಾರ ಆಸ್ತಿ ಹಾನಿಯಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ''ಭಾರತವು ತನ್ನ ನೆರೆಯ ರಾಷ್ಟ್ರ ನೆಪಾಳದ ಬೆಂಬಲಕ್ಕೆ ನಿಂತಿದೆ. ಸಾಧ್ಯವಿರುವ ಎಲ್ಲ ನೆರವುಗಳನ್ನು ನೀಡಲು ಸಿದ್ಧವಾಗಿದೆ'' ಎಂದು ಮೋದಿ ತಿಳಿಸಿದ್ದಾರೆ.
"ನೇಪಾಳದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಪ್ರಾಣ ಹಾನಿ ಮತ್ತು ಆಸ್ತಿಪಾಸ್ತಿ ಹಾನಿ ಸಂಭವಿಸಿರುವುದಕ್ಕೆ ತೀವ್ರ ದುಃಖಿತನಾಗಿದ್ದೇನೆ. ಭಾರತ ನೇಪಾಳದ ಜನರ ಬೆಂಬಲಕ್ಕೆ ನಿಂತಿದೆ. ಅಗತ್ಯವಿರುವ ಎಲ್ಲ ರೀತಿಯ ಸಹಾಯಗಳನ್ನು ನೀಡಲು ಸಿದ್ಧವಾಗಿದೆ. ದುಃಖಿತ ಕುಟುಂಬಗಳು ಮತ್ತು ಗಾಯಾಳುಗಳು ಆದಷ್ಟು ಬೇಗನೇ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಪ್ರಧಾನಿ ಮೋದಿಯವರ ಸಂದೇಶವು, ನೇಪಾಳದೊಂದಿಗೆ ಭಾರತದ ಒಗ್ಗಟ್ಟನ್ನು ಸೂಚಿಸುತ್ತದೆ. ಮಾತ್ರವಲ್ಲದೆ ಸವಾಲಿನ ಸಮಯದಲ್ಲಿ ಸಹಕಾರ ಮತ್ತು ಪರಸ್ಪರ ಬೆಂಬಲದ ಮಹತ್ವವನ್ನು ಒತ್ತಿಹೇಳುತ್ತದೆ.