ಕೊಲಂಬೊ(ಶ್ರೀಲಂಕಾ):ಹಿಂದೂ ಮಹಾಸಾಗರದಲ್ಲಿ ಭದ್ರತೆಯನ್ನು ಹೆಚ್ಚಿಸಲು ಮತ್ತು ನೌಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ನ ನೌಕಾಪಡೆಗಳು ಸಾಗರೋತ್ತರ ತ್ರಿಪಕ್ಷೀಯ ಸಮರಾಭ್ಯಾಸ ನಡೆಸಿವೆ.
ಎರಡು ದಿನಗಳ ಕಾಲ ಈ ಸಮರಾಭ್ಯಾಸ ನಡೆದಿದ್ದು, ಎರಡು ವರ್ಷಗಳಿಗೊಮ್ಮೆ ಈ ಸಮರಾಭ್ಯಾಸ ನಡೆಸಲಾಗುತ್ತದೆ. 30 ವರ್ಷಗಳ ಹಿಂದೆ ಈ ಸಮರಾಭ್ಯಾಸ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಆರಂಭವಾಗಿದ್ದು, 2012ರಿಂದ ಶ್ರೀಲಂಕಾ ಸೇರ್ಪಡೆಯಾಗಿದೆ. ಇದು 15ನೇ ಆವೃತ್ತಿಯ ಸಮರಾಭ್ಯಾಸವಾಗಿದೆ.
ಈಗ ಕೊಲಂಬೊ ಸೆಕ್ಯುರಿಟಿ ಕಾನ್ಕ್ಲೇವ್ (ಸಿಎಸ್ಸಿ) ಅಡಿಯಲ್ಲಿ ಎರಡು ದಿನಗಳ ಸಮರಾಭ್ಯಾಸ ನಡೆದಿದ್ದು, ಕಡಲ ಭದ್ರತೆಗೆ ಸಹಕಾರ ನೀಡುವ ಪ್ರಯತ್ನವಾಗಿದೆ ಎಂದು ಶ್ರೀಲಂಕಾದಲ್ಲಿನ ಭಾರತೀಯ ಹೈಕಮೀಷನ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಈ ಸಮರಾಭ್ಯಾಸಕ್ಕೆ ದೋಸ್ತಿ ಎಂದು ಹೆಸರಿಡಲಾಗಿದೆ.