ನ್ಯೂಯಾರ್ಕ್, ಅಮೆರಿಕ:ಪಾಕಿಸ್ತಾನವು ಭಾರತದ ವಿರುದ್ಧ ದುರುದ್ದೇಶಪೂರಿತ ಪ್ರಚಾರ ಮಾಡಲು ವಿಶ್ವಸಂಸ್ಥೆಯ ವೇದಿಕೆಗಳನ್ನು ಬಳಸಿಕೊಂಡಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಮಿಷನ್‌ನ ಸಲಹೆಗಾರ ಡಾ.ಕಾಜಲ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದು, ಜಮ್ಮು ಕಾಶ್ಮೀರದಲ್ಲಿ ಅಕ್ರಮವಾಗಿ ವಶಕ್ಕೆ ಪಡೆದಿರುವ ಎಲ್ಲ ಪ್ರದೇಶಗಳಿಂದ ಪಾಕಿಸ್ತಾನ ಜಾಗ ಖಾಲಿ ಮಾಡಬೇಕೆಂದು ಆಗ್ರಹಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾತನಾಡಿದ ಡಾ.ಕಾಜಲ್ ಭಟ್ ಅವರು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣವಾಗಿ ಭಾರತಕ್ಕೆ ಸೇರಿವೆ. ಪಾಕಿಸ್ತಾನ ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ. ಈ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡಬೇಕು ಎಂದು ಒತ್ತಾಯಿಸಿದರು.
ಅಪಪ್ರಚಾರಕ್ಕೆ ಅಂತಾರಾಷ್ಟ್ರೀಯ ವೇದಿಕೆ ಬಳಕೆ
ಭಾರತದ ವಿರುದ್ಧ ಅಪಪ್ರಚಾರ ಮಾಡಲು ವಿಶ್ವಸಂಸ್ಥೆಯ ವೇದಿಕೆಗಳನ್ನು ಪಾಕಿಸ್ತಾನ ಬಳಸಿಕೊಂಡಿರುವುದು ಇದೇ ಮೊದಲಲ್ಲ ಎಂದು ಒತ್ತಿ ಹೇಳಿದ ಕಾಜಲ್ ಭಟ್, ಪಾಕಿಸ್ತಾನದ ಪ್ರತಿನಿಧಿಗಳು ತಮ್ಮ ದೇಶದಲ್ಲಿರುವ ಅವ್ಯವಸ್ಥೆಯನ್ನು ಮರೆಮಾಚುವ ಸಲುವಾಗಿ, ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಅಲ್ಲಿ ಭಯೋತ್ಪಾದಕರು ಸಾಮಾನ್ಯ ಜನರಂತೆ ವಾಸ ಮಾಡುತ್ತಿದ್ದು, ಅಲ್ಪ ಸಂಖ್ಯಾತ ಸಮುದಾಯಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.