ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ದಿನೇದಿನೇ ಇಳಿಕೆ ಕಂಡುಬರುತ್ತಿದೆ. ಕೋವಿಡ್ ವ್ಯಾಕ್ಸಿನ್ ನೀಡುವ ಕಾರ್ಯ ಸಹ ಭರದಿಂದ ಸಾಗುತ್ತಿದ್ದು, ಇಂದು 100 ಕೋಟಿ ಡೋಸ್ ಲಸಿಕೆ ವಿತರಿಸುವ ಮೂಲಕ ಭಾರತ ವಿಶೇಷ ಸಾಧನೆ ಮಾಡಿತು.
COVID19 Vaccine Century! 100 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಿಸಿದ ಭಾರತ - ಇಂದು 100 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ ದಾಖಲೆ ತಲುಪಲಿರುವ ಭಾರತ
ಜನವರಿ 16 ರಿಂದ ದೇಶದಲ್ಲಿ ಕೋವಿಡ್ ಲಸಿಕೆ ಹಾಕುವಿಕೆ ಕಾರ್ಯ ಆರಂಭಿಸಲಾಗಿತ್ತು. ಇದೀಗ ಕಳೆದ 9 ತಿಂಗಳಲ್ಲೇ ಭಾರತ 100 ಕೋಟಿ ಡೋಸ್ ಲಸಿಕೆ ವಿತರಿಸಿ ಸಾಂಕ್ರಾಮಿಕ ರೋಗ ತೊಲಗಿಸುವ ನಿಟ್ಟಿನಲ್ಲಿ ಗುರುತರ ಸಾಧನೆ ಮಾಡಿದೆ.
ಹೌದು, ಮೊದಲ ಮತ್ತು ಎರಡನೇ ಡೋಸ್ ಸೇರಿದಂತೆ ಇಂದು (ಗುರುವಾರ) 100 ಕೋಟಿ ಕೋವಿಡ್ ಲಸಿಕೆ ನೀಡುವ ಗುರಿಯನ್ನು ದೇಶ ತಲುಪಿದೆ. ದೇಶದಲ್ಲಿ ಶೇಕಡಾ 74ರಷ್ಟು ಜನರು ಮೊದಲ ಡೋಸ್ ಪಡೆದಿದ್ದರೆ, ಶೇ 31 ಮಂದಿ ಸಂಪೂರ್ಣವಾಗಿ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.
ಜನವರಿ 16 ರಿಂದ ದೇಶದಲ್ಲಿ ಲಸಿಕೆ ಹಾಕುವಿಕೆಯನ್ನು ಆರಂಭಿಸಲಾಗಿತ್ತು. ಅಧಿಕೃತ ಮಾಹಿತಿಯ ಪ್ರಕಾರ, ಎಂಟು ರಾಜ್ಯಗಳು ಈಗಾಗಲೇ 6 ಕೋಟಿ ಡೋಸ್ ವ್ಯಾಕ್ಸಿನ್ ನೀಡುವ ಗಡಿ ದಾಟಿವೆ. ಉತ್ತರ ಪ್ರದೇಶ (12.08 ಕೋಟಿ), ಮಹಾರಾಷ್ಟ್ರ (9.23 ಕೋಟಿ), ಪಶ್ಚಿಮ ಬಂಗಾಳ (6.82 ಕೋಟಿ), ಗುಜರಾತ್ (6.73 ಕೋಟಿ), ಮಧ್ಯ ಪ್ರದೇಶ (6.67 ಕೋಟಿ) , ಬಿಹಾರ (6.30 ಕೋಟಿ), ಕರ್ನಾಟಕ (6.13 ಕೋಟಿ) ಮತ್ತು ರಾಜಸ್ಥಾನ (6.07 ಕೋಟಿ) ಡೋಸ್ ಲಸಿಕೆ ನೀಡಲಾಗಿದೆ.