ನವದೆಹಲಿ:ಭಾರತವು ಪ್ಯಾಲೆಸ್ಟೈನ್ ಜನರಿಗಾಗಿ ವೈದ್ಯಕೀಯ ಮತ್ತು ವಿಪತ್ತು ಪರಿಹಾರ ಸಾಮಗ್ರಿಗಳನ್ನು ಒಳಗೊಂಡಿರುವ ಮಾನವೀಯ ನೆರವು ರವಾನಿಸಿದೆ. ಸುಮಾರು 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ವಾಯುಪಡೆಯ ವಿಮಾನವು ಈಜಿಪ್ಟ್‌ನತ್ತ ಹಾರಾಟ ಮಾಡಿದೆ. ಈ ಕುರಿತು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಭಾನುವಾರ ಮಾಹಿತಿ ನೀಡಿದ್ದಾರೆ.
ಭಾರತದ ಕಲ್ಪಿಸಿರುವ ವೈದ್ಯಕೀಯ ನೆರವಿನಲ್ಲಿ ಅಗತ್ಯ ಜೀವರಕ್ಷಕ ಔಷಧಗಳು, ತುರ್ತು ವೈದ್ಯಕೀಯ ಪರಿಸ್ಥಿತಿಗಳನ್ನು ನಿಭಾಯಿಸುವ ರಕ್ಷಣಾತ್ಮಕ ಮತ್ತು ಶಸ್ತ್ರಚಿಕಿತ್ಸಾ ವಸ್ತುಗಳನ್ನು ಒಳಗೊಂಡಿವೆ. ಗಾಯಾಳುಗಳ ಆರೈಕೆಗೆ ಸಂಬಂಧಿಸಿದ ಸಾಮಗ್ರಿಗಳು ಸಹ ಇದೆ. ಜೊತೆಗೆ ವಿಪತ್ತು ಪರಿಹಾರ ಸಾಮಗ್ರಿಗಳಾದ ಟೆಂಟ್‌ಗಳು, ಬ್ಯಾಗ್ಗಳು, ಟಾರ್ಪಾಲಿನ್‌ಗಳು, ನೀರು ಶುದ್ಧೀಕರಣ ಮಾತ್ರೆಗಳು, ಮೂಲಭೂತ ನೈರ್ಮಲ್ಯ ವಸ್ತುಗಳ ನೆರವನ್ನು ಭಾರತ ಕಲ್ಪಿಸಿದೆ. ಈ ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ಸಿ17 ವಿಮಾನವು ದೆಹಲಿ ಸಮೀಪದ ಹಿಂಡನ್ ವಾಯುನೆಲೆಯಿಂದ ಬೆಳಗ್ಗೆ 8 ಗಂಟೆಗೆ ಹಾರಾಟ ಮಾಡಿದ್ದು, ಈಜಿಪ್ಟ್‌ನ ಎಲ್-ಅರಿಶ್ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 3 ಗಂಟೆಗೆ ಇಳಿಯಲಿದೆ.
ಈ ಕುರಿತ ವಿದೇಶಾಂಗ ವಕ್ತಾರ ಅರಿಂದಮ್ ಬಾಗ್ಚಿ ಮಾಹಿತಿ ನೀಡಿದ್ದು, ''ಭಾರತವು ಪ್ಯಾಲೆಸ್ಟೈನ್ ಜನರಿಗೆ ಮಾನವೀಯ ನೆರವು ರವಾನಿಸುತ್ತದೆ. ಪ್ಯಾಲೆಸ್ಟೈನ್ ಜನರಿಗಾಗಿ ಸುಮಾರು 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ವಾಯುಪಡೆಯ ವಿಮಾನವು ಸಿ-17 ವಿಮಾನವು ಈಜಿಪ್ಟ್‌ನ ಎಲ್-ಅರಿಶ್ ವಿಮಾನ ನಿಲ್ದಾಣಕ್ಕೆ ಹೊರಟಿದೆ. ಈ ವಸ್ತುವು ಅಗತ್ಯ ಜೀವ ಉಳಿಸುವ ಔಷಧಿಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಟೆಂಟ್‌ಗಳು, ಮಲಗುವ ಬ್ಯಾಗ್ಗಳು, ಟಾರ್ಪಾಲಿನ್‌ಗಳು, ನೈರ್ಮಲ್ಯ ಉಪಯುಕ್ತತೆಗಳು, ನೀರು ಶುದ್ಧೀಕರಣ ಮಾತ್ರೆಗಳು ಇತರ ಅಗತ್ಯ ವಸ್ತುಗಳನ್ನು ಒಳಗೊಂಡಿದೆ'' ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.