ನವದೆಹಲಿ: ದೇಶದ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗ ದೀಪಾವಳಿಗೆ ದಿನಗಣನೆ ಶುರುವಾಗಿದೆ. ದೀಪಗಳ ಹಬ್ಬಕ್ಕೂ ಮುನ್ನ ಬರುವ ಧನತೆರಸ್ ಅಥವಾ ಧನತ್ರಯೋದಶಿ ಕೂಡ ಹಿಂದೂಗಳ ಪಾಲಿಗೆ ಮಹತ್ವ ಪಡೆದುಕೊಂಡಿದೆ. ಶುಕ್ರವಾರವಾದ ಇಂದು ಎಲ್ಲೆಡೆ ಧನತ್ರಯೋದಶಿ ಆಚರಿಸಲಾಗುತ್ತಿದೆ. ಇದರೊಂದಿಗೆ ಚಿನ್ನ ಹಾಗೂ ಬೆಳ್ಳಿ ಆಭರಣಗಳಿಗೂ ಬೇಡಿಕೆ ಹೆಚ್ಚಾಗಿದೆ.
ಧನತ್ರಯೋದಶಿ ಆಚರಣೆ ವಿಶೇಷ: ದೇಶದಾದ್ಯಂತ ಧನತೆರಸ್ ಹಬ್ಬವನ್ನೂ ಅಪಾರ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದಿನ ಸಿದ್ಧಿ ವಿನಾಯಕ ಗಣೇಶ, ಸಂಪತ್ತಿನ ಅಧಿದೇವತೆಗಳಾದ ಮಹಾಲಕ್ಷ್ಮೀ, ಧನ್ವಂತರಿ, ಕುಬೇರರನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ. ಈ ದಿನವನ್ನು ಹೊಸ ವಸ್ತುಗಳ ಖರೀದಿಗಳಿಗೆ ಮಂಗಳಕರ ಎಂದೇ ಜನತೆಯ ನಂಬಿಕೆಯಾಗಿದೆ. ಚಿನ್ನ, ಬೆಳ್ಳಿ ಆಭರಣಗಳು, ಪಾತ್ರೆಗಳು, ಅಡುಗೆ ಸಾಮಗ್ರಿ, ವಾಹನ, ಎಲೆಕ್ಟ್ರಾನಿಕ್ಸ್ ವಸ್ತುಗಳು ಹಾಗೂ ಬಟ್ಟೆ ಹೆಚ್ಚಾಗಿ ಖರೀದಿ ಮಾಡಲಾಗುತ್ತದೆ. ಗಮನಾರ್ಹ ಸಂಗತಿ ಎಂದರೆ, ಪೊರಕೆಗಳ ಖರೀದಿ ಕೂಡ ಮಂಗಳಕರವೆಂದೇ ಪರಿಗಣಿಸಲಾಗುತ್ತದೆ.
ಚಿನ್ನದ ಬೆಲೆ ತಗ್ಗಿದ ಖುಷಿ:ಭಾರತವು ವಿಶ್ವದ ಅತಿದೊಡ್ಡ ಚಿನ್ನದ ಗ್ರಾಹಕರನ್ನು ಹೊಂದಿದೆ. ದೀಪಾವಳಿ ಪೂರ್ವದ ಧನತ್ರಯೋದಶಿಯೂ ಸಹ ಪ್ರತಿ ವರ್ಷ ಉತ್ತಮ ಚಿನ್ನ ಹಾಗೂ ಬೆಳ್ಳಿ ಖರೀದಿಗೆ ಸಾಕ್ಷಿಯಾಗುತ್ತದೆ. ಈ ವರ್ಷ ಸಹ ಎರಡೂ ಲೋಹಗಳ ಮಾರಾಟ ಚುರುಕು ಪಡೆದಿದೆ. ಆಭರಣಗಳ ಪ್ರಿಯರಿಗೆ ಖುಷಿಯ ಸಂಗತಿ ಎಂದರೆ ಚಿನ್ನದ ಬೆಲೆಗಳು ಕೆಲ ದಿನಗಳಿಂದ ಕುಸಿತ ಕಂಡಿದೆ. ಅಕ್ಟೋಬರ್ 28ರಂದು 63,000 ರೂಪಾಯಿಗಳ ಗರಿಷ್ಠ ಮಟ್ಟದಿಂದ 10 ಗ್ರಾಂಗೆ (24 ಕ್ಯಾರೆಟ್) 800ರಿಂದ 1,500 ರೂಪಾಯಿಗಳಷ್ಟು ಚಿನ್ನದ ಬೆಲೆ ಕುಸಿದಿದೆ.
ಇದರ ನಡುವೆ ಹಿಂದೂ ಕ್ಯಾಲೆಂಡರ್ ಪ್ರಕಾರ, ಇಂದು ಧನತೆರಸ್ ಆಚರಿಸಲಾಗುತ್ತಿದೆ. ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಖರೀದಿಸಲು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಿರುವುದರಿಂದ ಗ್ರಾಹಕರಿಂದಲೂ ಬೇಡಿಕೆ ಹೆಚ್ಚಾಗಿದೆ. ಚಿನ್ನದ ಮಾರಾಟವು ಕಳೆದ ವರ್ಷದ ಮಟ್ಟವನ್ನು ಮೀರಿಸಬಹುದೆಂದು ವ್ಯಾಪಾರಿಗಳು ನಿರೀಕ್ಷಿಸುತ್ತಿದ್ದಾರೆ. ಇತರ ಗೃಹೋಪಯೋಗಿ ವಸ್ತುಗಳ ಮಾರಾಟ ಕೂಡ ಹೆಚ್ಚಾಗಬಹುದು ಎಂಬ ಲೆಕ್ಕಾಚಾರದಲ್ಲಿ ವ್ಯಾಪಾರಿಗಳು ತೊಡಗಿದ್ದಾರೆ.