ನವದೆಹಲಿ :ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಈ ಎರಡೂ ಟೆಲಿಕಾಂ ಕಂಪನಿಗಳು ದೇಶದಲ್ಲಿ ಈಗಾಗಲೇ 5ಜಿ ನೆಟ್ವರ್ಕ್ ಆರಂಭಿಸಿದ್ದು, ಮೊಬೈಲ್ ಡೇಟಾ ವೇಗದ ವಿಚಾರದಲ್ಲಿ ಭಾರತವು ಜಾಗತಿಕವಾಗಿ 10 ಸ್ಥಾನಗಳಷ್ಟು ಭಾರಿ ಏರಿಕೆ ಕಂಡಿದೆ. ಈ ಮುನ್ನ ಡಿಸೆಂಬರ್‌ನಲ್ಲಿ 79ನೇ ಸ್ಥಾನದಲ್ಲಿದ್ದ ದೇಶ ಜನವರಿಯಲ್ಲಿ 69 ನೇ ಸ್ಥಾನಕ್ಕೆ ತಲುಪಿದೆ ಎಂದು ಸೋಮವಾರ ವರದಿಯೊಂದು ತಿಳಿಸಿದೆ. ನೆಟ್‌ವರ್ಕ್ ಇಂಟೆಲಿಜೆನ್ಸ್ ಮತ್ತು ಕನೆಕ್ಟಿವಿಟಿ ವಿಶ್ಲೇಷಕ ಕಂಪನಿ ಓಕ್ಲಾ (Ookla) ಪ್ರಕಾರ, ದೇಶವು ಜಾಗತಿಕವಾಗಿ ಒಟ್ಟಾರೆ ಮಧ್ಯಮ ಸ್ಥಿರ ಬ್ರಾಡ್‌ಬ್ಯಾಂಡ್ ವೇಗದ ಶ್ರೇಣಿಯಲ್ಲಿ ಎರಡು ಸ್ಥಾನಗಳಷ್ಟು ಮೇಲಕ್ಕೇರಿದೆ. ಇದು ಡಿಸೆಂಬರ್‌ನಲ್ಲಿ 81 ಇದ್ದುದು ಜನವರಿಯಲ್ಲಿ 79 ಕ್ಕೆ ತಲುಪಿದೆ.
ಭಾರತದಲ್ಲಿ ಒಟ್ಟಾರೆ ಸ್ಥಿರ ಸರಾಸರಿ ಡೌನ್‌ಲೋಡ್ ವೇಗವು ಡಿಸೆಂಬರ್‌ನಲ್ಲಿ 49.14 Mbps ನಿಂದ ಜನವರಿಯಲ್ಲಿ 50.02 Mbps ಗೆ ಸ್ವಲ್ಪ ಹೆಚ್ಚಳವನ್ನು ಕಂಡಿದೆ. ನವೆಂಬರ್‌ನಲ್ಲಿ, ಜಾಗತಿಕವಾಗಿ ಮಧ್ಯಮ ಮೊಬೈಲ್ ವೇಗದಲ್ಲಿ ಭಾರತವು 105 ನೇ ಸ್ಥಾನದಲ್ಲಿದೆ. Ookla ಈ ವರ್ಷದ ಜನವರಿಯಲ್ಲಿ 29.85 Mbps ಸರಾಸರಿ ಮೊಬೈಲ್ ಡೌನ್‌ಲೋಡ್ ವೇಗವನ್ನು ದಾಖಲಿಸಿದೆ. ಇದು ಡಿಸೆಂಬರ್ 2022 ರಲ್ಲಿದ್ದ 25.29 Mbps ಗಿಂತ ಉತ್ತಮವಾಗಿದೆ.
ಒಟ್ಟಾರೆ ಜಾಗತಿಕ ಸರಾಸರಿ ಮೊಬೈಲ್ ವೇಗದ ವಿಷಯದಲ್ಲಿ ಯುಎಇ ಅಗ್ರಸ್ಥಾನದಲ್ಲಿದೆ. ಪಪುವಾ ನ್ಯೂಗಿನಿಯಾ ಜಾಗತಿಕವಾಗಿ ಈ ಶ್ರೇಣಿಯಲ್ಲಿ 24 ಸ್ಥಾನ ಮೇಲೇರಿದೆ. ಸ್ಥಿರ ಬ್ರಾಡ್‌ಬ್ಯಾಂಡ್ ಡೌನ್‌ಲೋಡ್ ವೇಗದಲ್ಲಿ ಸಿಂಗಾಪುರವು ಅಗ್ರಸ್ಥಾನದಲ್ಲಿ ಸ್ಥಿರವಾಗಿದೆ ಮತ್ತು ಸೈಪ್ರಸ್ ಜಾಗತಿಕವಾಗಿ 20 ಸ್ಥಾನ ಮೇಲಕ್ಕೇರಿದೆ. ಏತನ್ಮಧ್ಯೆ, ರಿಲಯನ್ಸ್ ಜಿಯೊದ ಟ್ರೂ 5 ಜಿ ಸೇವೆಗಳು 236 ಕ್ಕೂ ಹೆಚ್ಚು ನಗರಗಳಲ್ಲಿ ಲೈವ್ ಆಗಿವೆ. ಅತ್ಯಂತ ಕಡಿಮೆ ಸಮಯದಲ್ಲಿ ಇಷ್ಟೊಂದು ವಿಶಾಲ ನೆಟ್‌ವರ್ಕ್ ಅನ್ನು ಸ್ಥಾಪಿಸಿದ ಮೊದಲ ಮತ್ತು ಏಕೈಕ ಟೆಲಿಕಾಂ ಆಪರೇಟರ್ ಆಗಿದೆ ಜಿಯೊ.