ನವದೆಹಲಿ:ವಿಪಕ್ಷಗಳ ಮೈತ್ರಿಕೂಟವಾಗಿರುವ ಐಎನ್ಡಿಐಎ ಒಕ್ಕೂಟದ ಪಕ್ಷಗಳೊಂದಿಗೆ ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ಚರ್ಚೆ ಮಾಡಲು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜವಾಬ್ದಾರಿ ವಹಿಸಿದ್ದಾರೆ.
ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಪಕ್ಷದಲ್ಲಿ ಈ ಇಬ್ಬರು ಅನುಭವಿ ಹಿರಿಯರ ಪಾತ್ರದ ಬಗ್ಗೆ ಊಹಾಪೋಹಗಳು ಸೃಷ್ಟಿಯಾಗಿದ್ದವು. ಆದರೆ ಸದ್ಯ ಇವರಿಬ್ಬರಿಗೂ ಕಾಂಗ್ರೆಸ್ ಪ್ರಮುಖ ಜವಾಬ್ದಾರಿಯನ್ನು ವಹಿಸಿದೆ. ಗೆಹ್ಲೋಟ್, ಬಘೇಲ್ ಮತ್ತು ಸಮಿತಿಯ ಇತರ ಸದಸ್ಯರು ಈಗ ತಮ್ಮ ರಾಜಕೀಯ ಅನುಭವ ಮತ್ತು ಕೌಶಲಗಳನ್ನು ಬಳಸಿಕೊಂಡು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮತ್ತು ಆರ್ಜೆಡಿ ನಾಯಕ ಲಾಲು ಯಾದವ್ ಅವರೊಂದಿಗೆ ಲೋಕಸಭಾ ಸ್ಥಾನಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
ಉತ್ತರಪ್ರದೇಶದಲ್ಲಿ ಪಕ್ಷದ ಲೋಕಸಭಾ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲು ರಾಹುಲ್ ಮತ್ತು ಪ್ರಿಯಾಂಕಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದ ಒಂದು ದಿನದ ನಂತರ ಕಾಂಗ್ರೆಸ್ ಮೈತ್ರಿ ಸಮಿತಿಯನ್ನು ರಚಿಸಿರುವುದು ಗಮನಾರ್ಹ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವು ಎನ್ಸಿಪಿ ಮತ್ತು ಶಿವಸೇನೆ ಯುಬಿಟಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಅಲ್ಲಿ ಸೀಟು ಹಂಚಿಕೆಗೆ ಹೆಚ್ಚಿನ ಸಮಸ್ಯೆಯಾಗಲಾರದು ಎಂದು ಪಕ್ಷದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.