ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಭಾರತ ತೀವ್ರವಾಗಿ ಖಂಡಿಸಿದೆ. ಪಾಕಿಸ್ತಾನ ಮತ್ತಷ್ಟು ಕೆಳ ಮಟ್ಟಕ್ಕಿಳಿದಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿರುಗೇಟು ನೀಡಿದೆ.
ಪಾಕಿಸ್ತಾನ ಭಯೋತ್ಪಾದಕರ ಕೇಂದ್ರವಾಗಿದೆ ಎಂಬ ವಿದೇಶಾಂಗ ಸಚಿವ ಜೈಶಂಕರ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಬಿಲಾವಲ್ ಭುಟ್ಟೋ, ಬಿನ್ ಲಾಡೆನ್ ಸತ್ತಿದ್ದಾನೆ, ಗುಜರಾತ್ ಕಟುಕ ಬದುಕಿದ್ದಾನೆ ಎಂದು ವಿವಾದಿತ ಹೇಳಿಕೆ ನೀಡಿದ್ದರು. ಇದಕ್ಕೆ ತೀಕ್ಷ್ಣವಾಗಿಯೇ ತಿರುಗೇಟು ನೀಡಿರುವ ವಿದೇಶಾಂಗ ಸಚಿವಾಲಯವು, ಪಾಕಿಸ್ತಾನದ ವಿದೇಶಾಂಗ ಸಚಿವರದ್ದು ಹತಾಶೆಯ ಹೇಳಿಕೆ. ಭಯೋತ್ಪಾದನೆಯನ್ನು ದೇಶದ ನೀತಿಯ ಭಾಗವನ್ನಾಗಿ ಮಾಡಿಕೊಂಡಿರುವ ನಿಮಗೆ ನಿಮ್ಮ ದೇಶದ ಭಯೋತ್ಪಾದಕ ಮಾಸ್ಟರ್‌ಮೈಂಡ್‌ಗಳ ಬಗ್ಗೆಯೇ ಹತಾಶೆ ಮೂಡಬೇಕೆಂದು ಹೇಳಿದೆ.
ಭಯೋತ್ಪಾದಕ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಪ್ರಾಯೋಜಕತ್ವ, ಆಶ್ರಯ ಮತ್ತು ಸಕ್ರಿಯವಾಗಿ ಹಣಕಾಸು ಒದಗಿಸುವಲ್ಲಿ ಪಾಕಿಸ್ತಾನದ ನಿರ್ವಿವಾದದ ಪಾತ್ರ ಇದೆ. ನ್ಯೂಯಾರ್ಕ್, ಮುಂಬೈ, ಪುಲ್ವಾಮಾ, ಪಠಾಣ್‌ಕೋಟ್ ಮತ್ತು ಲಂಡನ್‌ನಂತಹ ನಗರಗಳು ಪಾಕಿಸ್ತಾನ ಪ್ರಾಯೋಜಿತ, ಬೆಂಬಲಿತ ಮತ್ತು ಪ್ರಚೋದಿತ ಭಯೋತ್ಪಾದನೆಯ ಗಾಯದ ಗುರುತುಗಳನ್ನು ಹೊಂದಿವೆ. ‘ಮೇಕ್ ಇನ್ ಪಾಕಿಸ್ತಾನ್’ ಭಯೋತ್ಪಾದನೆಯನ್ನು ನಿಲ್ಲಿಸಬೇಕೆಂದು ಭಾರತ ವಾಗ್ದಾಳಿ ನಡೆಸಿದೆ.
ಪಾಕಿಸ್ತಾನವು ಒಸಾಮಾ ಬಿನ್ ಲಾಡೆನ್ನನ್ನು ಹುತಾತ್ಮ ಎಂದು ವೈಭವೀಕರಿಸುವ ಮತ್ತು ಲಖ್ವಿ, ಹಫೀಜ್ ಸಯೀದ್, ಮಸೂದ್ ಅಜರ್, ಸಾಜಿದ್ ಮಿರ್ ಮತ್ತು ದಾವೂದ್ ಇಬ್ರಾಹಿಂ ಅವರಂತಹ ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶವಾಗಿದೆ. ವಿಶ್ವಸಂಸ್ಥೆಯಿಂದ ಗೊತ್ತುಪಡಿಸಿದ 126 ಭಯೋತ್ಪಾದಕರು ಮತ್ತು 27 ಭಯೋತ್ಪಾದಕ ಘಟಕಗಳನ್ನು ಹೊಂದಿರುವ ಯಾವುದೇ ದೇಶವು ಹೆಮ್ಮೆಪಡುವಂತದ್ದಲ್ಲ ಎಂದು ಪಾಕಿಸ್ತಾನದ ಜನ್ಮವನ್ನು ಭಾರತ ಜಾಲಾಡಿದೆ.
ಇದನ್ನೂ ಓದಿ:ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಬಿಂದು: ಜೈಶಂಕರ್