ನವದೆಹಲಿ:ಕಳೆದ 24 ಗಂಟೆಗಳಲ್ಲಿ 1,41,986 ಹೊಸ ಸೋಂಕುಗಳು ಪತ್ತೆಯಾಗಿದ್ದು, 285 ಸಾವುಗಳು ದಾಖಲಾಗಿವೆ. ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿತ್ಯ ಬಹು ಏರಿಕೆ ಕಾಣುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆತಂಕ ವ್ಯಕ್ತಪಡಿಸಿದೆ.
ದಿನದ ಹಿಂದೆಯಷ್ಟೇ ವರದಿಯಾದ ಪ್ರಕರಣಗಳ ಸಂಖ್ಯೆಗಿಂತ ಇಂದು ಸರಿಸುಮಾರು ಶೇ.30ರಷ್ಟು ಹೆಚ್ಚಾಗಿದೆ. ದೇಶದಲ್ಲಿ ಈಗ 4,72,169 ಸಕ್ರಿಯ ಪ್ರಕರಣಗಳಿವೆ. ಓಮಿಕ್ರಾನ್ ಸಂಖ್ಯೆ ಕೂಡಾ 3,071 ದಾಟಿದೆ. ಈಗಾಗಲೇ ದೇಶದ 27 ರಾಜ್ಯಗಳಲ್ಲಿ ಒಮಿಕ್ರಾನ್ ಪತ್ತೆಯಾಗಿದ್ದು, 1203 ಜನರು ಈ ಹೊಸ ತಳಿಯಿಂದ ಗುಣಮುಖರಾಗಿದ್ದಾರೆ.
ಒಮಿಕ್ರಾನ್ ಪ್ರಕರಣಗಳ ಪಟ್ಟಿ ಪ್ರಕರಣಗಳ ಉಲ್ಬಣದಿಂದಾಗಿ ಶಾಲೆಗಳನ್ನು ಮುಚ್ಚುವುದು, ಸಾರ್ವಜನಿಕ ಸಾರಿಗೆಯ ಮೇಲಿನ ನಿರ್ಬಂಧ ಮತ್ತು ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಾಗಲೇ ಹಲವಾರು ರಾಜ್ಯಗಳು ತೆಗೆದುಕೊಂಡಿವೆ. ಕಳೆದ 24 ಗಂಟೆಗಳಲ್ಲಿ 285 ಮಂದಿ ಕೋವಿಡ್ನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 4,83,463ಕ್ಕೆ ಏರಿಕೆ ಆಗಿದೆ.
ಇನ್ನು ಕಳೆದ 24 ಗಂಟೆಯಲ್ಲಿ 40,895 ಕೊರೊನಾ ಸೋಂಕಿನಿಂದ ಗುಣಮುಖರಾಗುವ ಮೂಲಕ ಇದುವರೆಗೆ ದೇಶದಲ್ಲಿ 3,44,12,740 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜನವರಿ 16 ರಿಂದ ದೇಶಾದ್ಯಂತ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಈವರೆಗೆ 150.06 ಕೋಟಿಗೂ ಅಧಿಕ ಡೋಸ್ ವ್ಯಾಕ್ಸಿನ್ ನೀಡಲಾಗಿದೆ.