ನವದೆಹಲಿ: ಭಾರತದ ಕೋವಿಡ್ ಸಾವು - ನೋವಿನ ಪ್ರಮಾಣದಲ್ಲಿ ಸ್ವಲ್ಪ ಇಳಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 27,254 ಹೊಸ ಕೋವಿಡ್ ಕೇಸ್ಗಳು ಪತ್ತೆಯಾಗಿದ್ದು, 219 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ದೇಶದಲ್ಲೀಗ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3,32,64,175ಕ್ಕೆ ಏರಿಕೆಯಾಗಿದ್ದು, ಈವರೆಗೆ ಒಟ್ಟು 4,42,874 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಪೈಕಿ ಇಲ್ಲಿಯವರೆಗೆ 3,24,47,032 ಮಂದಿ ಮಾರಣಾಂತಿಕ ವೈರಸ್ನಿಂದ ಗುಣಮುಖರಾಗಿದ್ದಾರೆ. ಉಳಿದಂತೆ 3,74,269 ಪ್ರಕರಣಗಳು ಮಾತ್ರ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
74.38 ಕೋಟಿ ಡೋಸ್ ವ್ಯಾಕ್ಸಿನೇಷನ್
ಜನವರಿ 16ರಿಂದ ದೇಶಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನ ಆರಂಭವಾಗಿದ್ದು, ಇಲ್ಲಿಯವರೆಗೆ ಒಟ್ಟು 74,38,37,64 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ನಿನ್ನೆ ಒಂದೇ ದಿನ 53,38,945 ಮಂದಿ ವ್ಯಾಕ್ಸಿನ್ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ವ್ಯಾಕ್ಸಿನೇಷನ್ನಲ್ಲಿ ಕೆಲ ರಾಷ್ಟ್ರಗಳನ್ನೇ ಹಿಂದಿಕ್ಕಿದ ರಾಜ್ಯಗಳಿವು..
ಕಳೆದ ಆಗಸ್ಟ್ ತಿಂಗಳಲ್ಲಿ ದೇಶದ ಆಗಸ್ಟ್ ತಿಂಗಳ ವ್ಯಾಕ್ಸಿನೇಷನ್ ಪ್ರಮಾಣ G7 ರಾಷ್ಟ್ರಗಳಿಗಿಂತಲೂ ಹೆಚ್ಚಿತ್ತು. ಇದೀಗ ಸೆಪ್ಟೆಂಬರ್ನಲ್ಲಿ ಉತ್ತರ ಪ್ರದೇಶ ರಾಜ್ಯವು ದೈನಂದಿನ ಲಸಿಕೆ ವಿತರಣೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದು, ಅಮೆರಿಕವನ್ನೇ ಹಿಂದಿಕ್ಕಿದೆ. 2ನೇ ಸ್ಥಾನದಲ್ಲಿರುವ ಗುಜರಾತ್ ರಾಜ್ಯವು ಮೆಕ್ಸಿಕೋ ದೇಶವನ್ನ, ಕರ್ನಾಟಕ ರಾಜ್ಯವು ರಷ್ಯಾವನ್ನ, ಮಧ್ಯಪ್ರದೇಶ ರಾಜ್ಯವು ಫ್ರಾನ್ಸ್ ಅನ್ನ ಹಾಗೂ ಹರಿಯಾಣ ರಾಜ್ಯವು ಕೆನಡಾ ಹಿಂದಿಕ್ಕಿವೆ.