ನವದೆಹಲಿ: ಅಲ್ಪಸಂಖ್ಯಾತರ ಮೇಲಿನ ದಾಳಿ ಕುರಿತಂತೆ ದೇಶದ ಧಾರ್ಮಿಕ ಸ್ವಾತಂತ್ರ್ಯವನ್ನು ವಿಮರ್ಶೆ ಮಾಡಿರುವ ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ವರದಿಯನ್ನು ಭಾರತ ಸರ್ಕಾರ ಮಂಗಳವಾರ ತಿರಸ್ಕರಿಸಿದೆ. ಇದು "ಪ್ರೇರಿತ" ಮತ್ತು "ಪಕ್ಷಪಾತ"ದಿಂದ ಕೂಡಿದೆ ಎಂದು ಆರೋಪಿಸಿದೆ.
ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ ಎಂದು ಅಮೆರಿಕ ತನ್ನ ವರದಿಯಲ್ಲಿ ಟೀಕಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, "ಅಮೆರಿಕದ ವಾರ್ಷಿಕ ವರದಿಯು ಭಾರತದಲ್ಲಿನ ಅಲ್ಪಸಂಖ್ಯಾತರ ಮೇಲಿನ ಆಪಾದಿತ ದಾಳಿಗಳನ್ನು ಪಟ್ಟಿ ಮಾಡಿ, ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಆದರೆ, ಇಂತಹ ವರದಿಗಳು ತಪ್ಪು ಮಾಹಿತಿ ನೀಡುತ್ತಿವೆ ಮತ್ತು ದೋಷಪೂರಿತವಾಗಿವೆ" ಎಂದು ಹೇಳಿದ್ದಾರೆ.
"ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ 2022 ರ ವರದಿಯ ಬಿಡುಗಡೆ ಬಗ್ಗೆ ನಮಗೆ ತಿಳಿದಿದೆ. ಕೆಲವು ಅಧಿಕಾರಿಗಳ ಪ್ರೇರಿತ ಮತ್ತು ಪಕ್ಷಪಾತದ ವ್ಯಾಖ್ಯಾನವು ವರದಿಗಳ ವಿಶ್ವಾಸಾರ್ಹತೆಯನ್ನು ಹಾಳು ಮಾಡುತ್ತಿದೆ. ಈ ವರದಿಯು ಸುಳ್ಳು ಮಾಹಿತಿ ಮತ್ತು ದೋಷಯುಕ್ತ ತಿಳುವಳಿಕೆಯನ್ನು ಆಧರಿಸಿರುವುದು ವಿಷಾದನೀಯ. ಯುಎಸ್ ಜೊತೆಗಿನ ನಮ್ಮ ಪಾಲುದಾರಿಕೆಯನ್ನು ನಾವು ಗೌರವಿಸುತ್ತೇವೆ. ಕೆಲವು ವಿಚಾರಗಳ ವಿನಿಮಯವನ್ನು ಮುಂದುವರಿಸುತ್ತೇವೆ" ಎಂದರು.
ಪ್ರಪಂಚಾದ್ಯಂತ ವಿವಿಧ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಗತಿಯನ್ನು ದಾಖಲಿಸುವ ವರದಿಯನ್ನು ಸೋಮವಾರ ಅಮೆರಿಕ ಬಿಡುಗಡೆಗೊಳಿಸಿದೆ. ಇದರಲ್ಲಿ ರಷ್ಯಾ, ಭಾರತ, ಚೀನಾ ಮತ್ತು ಸೌದಿ ಅರೇಬಿಯಾ ಸೇರಿದಂತೆ ಹಲವು ಸರ್ಕಾರಗಳು ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಗುರಿಯಾಗಿಸಿಕೊಂಡಿವೆ ಎಂದು ಆರೋಪಿಸಿದೆ.