ಅದು 2013. ಹಠಾತ್ ಪ್ರವಾಹ ಉಂಟಾಗಿ ದೇವಭೂಮಿ ಎಂದೇ ಕರೆಯುವ ಉತ್ತರಾಖಂಡ ಜಲಪ್ರಳಯಕ್ಕೆ ತುತ್ತಾಗಿ 6 ಸಾವಿರಕ್ಕೂ ಅಧಿಕ ಜನರು ಸಾವಿಗೀಡಾಗಿ, ಸಾವಿರಾರು ಜನರು ನಾಪತ್ತೆಯಾಗಿದ್ದರು. ಸರಿಯಾಗಿ ಒಂದು ದಶಕದ ನಂತರ ಅಂದರೆ, ನವೆಂಬರ್ 12 ರಂದು ಉತ್ತರಕಾಶಿಯ ಸಿಲ್ಕ್ಯಾರಾ ಸೇತುವೆ ಕುಸಿದು ರಸ್ತೆ ಸುರಂಗ ಕುಸಿತ ದುರಂತ ಸಂಭವಿಸಿತು. ಸತತ 17 ದಿನಗಳ ಕಾಲ ಕಾರ್ಯಾಚರಣೆ ನಡೆಸಿ, ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಲಾಗಿತ್ತು.
ಕಾರ್ಯಾಚರಣೆಗೆ ನೂರೊಂದು ಸವಾಲುಗಳು:ಸಿಲ್ಕ್ಯಾರಾ ಸುರಂಗವು 4.5 ಕಿಲೋಮೀಟರ್ ಉದ್ದವಿದ್ದು, ಎರಡು ಲೇನ್ನಿಂದ ಕೂಡಿದೆ. ಇದು ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿ(NH134)ಯ ಭಾಗವಾಗಿದೆ. ಕೇಂದ್ರ ಸರ್ಕಾರದ ಚಾರ್ ಧಾಮ್ ಯಾತ್ರಾ ಆಲ್ ವೆದರ್ ರೋಡ್ನ ಭಾಗವಾಗಿ ನಿರ್ಮಾಣ ಮಾಡುತ್ತಿದೆ. ರಾಜ್ಯದ ನಾಲ್ಕು ಪವಿತ್ರ ಸ್ಥಳಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥಗಳನ್ನು ಇದು ಸಂಪರ್ಕಿಸುತ್ತದೆ. ನಿರ್ಮಾಣ ಹಂತದಲ್ಲಿರುವ ಈ ಸೇತುವೆಯ ಒಂದು ಭಾಗ ನವೆಂಬರ್ 12 ರಂದು ಕುಸಿತವಾಗಿತ್ತು.
41 ಕಾರ್ಮಿಕರ ತಂಡ ಅದರ ರಕ್ಷಣೆಗೆಂದು ಒಳ ಹೋದಾಗ ಇನ್ನೊಂದು ಕುಸಿತಗೊಂಡ ಎಲ್ಲ ಕಾರ್ಮಿಕರು ಅದರೊಳಗೆ ಸಿಲುಕಿದರು. ಮಾಹಿತಿ ತಿಳಿದ ತಕ್ಷಣ ಎನ್ಡಿಆರ್ಎಫ್, ಎಸ್ಡಿಆರ್ಎಫ್, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (ಎನ್‌ಎಚ್‌ಐಡಿಸಿಎಲ್), ಇಂಡೋ - ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸೇರಿದಂತೆ ಹತ್ತಕ್ಕೂ ಹೆಚ್ಚು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದವು.
652 ಸರ್ಕಾರಿ ನೌಕರರು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದರು. ಮೊದಲು 10 ಮೀಟರ್ ಉದ್ದ ಮಣ್ಣು, ಕಲ್ಲುಬಂಡೆಗಳನ್ನು ತೆಗೆದು ಹಾಕಲಾಯಿತು. ನಿರಂತರ ಮಳೆ ಬೀಳುತ್ತಿದ್ದ ಕಾರಣ ಸೇತುವೆಯ ಒಳಗೆ ಮತ್ತಷ್ಟು ಕುಸಿತ ಉಂಟಾಯಿತು. ಇದರಿಂದ ಕಾರ್ಯಾಚರಣೆಗೆ ಭಾರಿ ಅಡ್ಡಿ ಉಂಟಾಯಿತು.
ಪೈಪ್ ಮೂಲಕ ಆಹಾರ ಸರಬರಾಜು:ಒಳಗೆ ಸಿಲುಕಿದ್ದ ಕಾರ್ಮಿಕರಿಗೆ ಆಹಾರ ಪೂರೈಕೆ ಮಾಡುವುದು ಸವಾಲಾಗಿತ್ತು. ಮೊದಲು ದೊಡ್ಡ ಪೈಪ್ ಒಂದನ್ನು ಕಾರ್ಮಿಕರ ಬಳಿಗೆ ಕಳುಹಿಸಲಾಯಿತು. ಅದರಲ್ಲಿ ಮೊದಲು ದ್ರವ ರೂಪದ ಆಹಾರ ಪೂರೈಕೆ ಮಾಡಲಾಯಿತು. ಕ್ರಮೇಣ ಅಕ್ಕಿ, ದಾಲ್ ಮತ್ತು ಒಣ ಹಣ್ಣುಗಳನ್ನು ನೀಡಲಾಯಿತು. ಕಾರ್ಮಿಕರ ನೈತಿಕ ಸ್ಥೈರ್ಯ ಕಾಪಾಡಲು ಮೈಕ್ ಅನ್ನು ಅಳವಡಿಸಲಾಯಿತು. ಇದರಿಂದ ಅವರು ನಿಯಮಿತವಾಗಿ ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಿದ್ದರು.
ಅಮೆರಿಕದಿಂದ ಗಜಗಾತ್ರದ ಆಗರ್ ಯಂತ್ರವನ್ನು ರವಾನೆ ಮಾಡಿಕೊಂಡು ಅದರ ಮೂಲಕ ಬಂಡೆ ಕಲ್ಲುಗಳನ್ನು ಕೊರೆಯಲಾಯಿತು. ದುರಂತ ಎಂದರೆ 15 ದಿನದಂದು ಆಗರ್ ಯಂತ್ರ ಮುರಿದು 50 ಮೀಟರ್ ಅಂತರದಲ್ಲಿ ಅದು ಸಿಲುಕಿಕೊಂಡಿತು. ಇದರಿಂದ ಕಾರ್ಯಾಚರಣೆ ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಕಾರ್ಮಿಕರನ್ನು ತಲುಪಲು 10 ಮೀಟರ್ ದೂರವಿದ್ದಾಗ ನಡೆದ ಹಠಾತ್ ಅಡಚಣೆಯಿಂದಾಗಿ, ರಕ್ಷಣಾ ಪಡೆಗಳು ಪ್ಲಾನ್ ಬಿ ಮಾದರಿ ಅಳವಡಿಸಿಕೊಂಡವು.
ರ‍್ಯಾಟ್ ಯಂತ್ರದಿಂದ ಕೊರೆತ:ಗಣಿಗಳಲ್ಲಿ ಬಳಸಲಾಗುವ ಸದ್ಯ ನಿಷೇಧಿಸಲಾಗಿರುವ ರ‍್ಯಾಟ್ ಯಂತ್ರದ ಮೂಲಕ ಕೊರೆಯುವ ಕಾರ್ಯಾಚರಣೆಯನ್ನು ಮರು ಆರಂಭಿಸಲಾಯಿತು. ಹಸ್ತಚಾಲಿತ ಯಂತ್ರದಿಂದ ಸತತ 24 ಗಂಟೆ ಅವಧಿಯಲ್ಲಿ 10 ಮೀಟರ್ ಉದ್ದ ಅವಶೇಷಗಳನ್ನು ಭೇದಿಸಲಾಯಿತು. ಬಳಿಕ ಅದರಲ್ಲಿ ದೊಡ್ಡ ಪೈಪ್ ಅನ್ನು ಅಳವಡಿಸಿ 41 ಕಾರ್ಮಿಕರನ್ನು ಒಬ್ಬೊಬ್ಬರಾಗಿ ರಕ್ಷಣೆ ಮಾಡಲಾಯಿತು. ಈ ಬೃಹತ್ ರಕ್ಷಣಾ ಕಾರ್ಯಾಚರಣೆಯು ನವೆಂಬರ್ 28 ರಂದು ಯಶಸ್ವಿಯಾಗಿ ಮುಗಿಯಿತು.
ಪ್ರಧಾನಿ ಮೋದಿ ಬಣ್ಣನೆ:ಕಾರ್ಮಿಕರನ್ನು ಯಶಸ್ವಿಯಾಗಿ ಕಾಪಾಡಿದ ಈ ಕಾರ್ಯಾಚರಣೆಯು ಹೊಗಳಿಕೆಗೆ ಪಾತ್ರವಾಯಿತು. ಇದು ದೇಶದ ಇತಿಹಾಸದಲ್ಲೇ ಚರಿತ್ರಾರ್ಹ ಸಾಧನೆಯಾಗಿ ಉಳಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದರು.
ಇದನ್ನೂ ಓದಿ:ಸಾವು ಗೆದ್ದ 41 ಕಾರ್ಮಿಕರು, 17 ದಿನಗಳ ನಂತರ ಸಿಲ್ಕ್ಯಾರಾ ಸುರಂಗದಿಂದ ಎಲ್ಲರೂ ಪಾರು; ಸಂಭ್ರಮ!