ನವದೆಹಲಿ:ತೀವ್ರಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾಗೆ ಭಾರತ ಮತ್ತೆ ನೆರವಿನ ಹಸ್ತಚಾಚಿದೆ. 21 ಸಾವಿರ ಟನ್ ರಾಸಾಯನಿಕ ಗೊಬ್ಬರವನ್ನು ಕಳುಹಿಸಿ ಸಹಾಯಕ್ಕೆ ಬಂದಿದೆ. ವಿಶೇಷ ಬೆಂಬಲದಡಿ ಭಾರತದ ಹೈಕಮಿಷನ್ ಆ ದೇಶಕ್ಕೆ ನಿನ್ನೆ ರಾಸಾಯನಿಕ ಗೊಬ್ಬರವನ್ನು ಹಸ್ತಾಂತರಿಸಿತು. ಕಳೆದ ತಿಂಗಳು 44 ಸಾವಿರ ಟನ್ ರಾಸಾಯನಿಕ ಗೊಬ್ಬರವನ್ನು ಪೂರೈಸಲಾಗಿತ್ತು. ಒಟ್ಟಾರೆ ಈ ವರ್ಷ ದ್ವೀಪರಾಷ್ಟ್ರಕ್ಕೆ ಭಾರತ 4 ಬಿಲಿಯನ್ ಡಾಲರ್ ನೆರವು ನೀಡಿದಂತಾಗಿದೆ.
"ಶ್ರೀಲಂಕಾದ ಕೃಷಿ ಕ್ಷೇತ್ರ ಮತ್ತೆ ಚೇತರಿಕೆ ಕಾಣಲು ಈ ನೆರವು ನೀಡಲಾಗಿದೆ. ದೇಶದ ಆಹಾರ ಭದ್ರತೆಗೂ ಇದು ಬೆಂಬಲವಾಗಿರಲಿದೆ. ಉಭಯ ರಾಷ್ಟ್ರಗಳ ನಿಕಟ ಬಾಂಧವ್ಯವನ್ನೂ ಇದು ತೋರಿಸುತ್ತದೆ" ಎಂದು ಕೊಲಂಬೊದಲ್ಲಿರುವ ಭಾರತ ಹೈಕಮಿಷನ್ ಸರಣಿ ಟ್ವೀಟ್ ಮಾಡಿದೆ.