ನವದೆಹಲಿ : ವಿಶ್ವದಲ್ಲಿ ಭಾರತದ ಸ್ಥಾನಮಾನ ಗಣನೀಯವಾಗಿ ಹೆಚ್ಚಿದೆ. ಈ ಬಗ್ಗೆ ಚೀನಾದ ಜನಪ್ರಿಯ ಪತ್ರಿಕೆ ಗ್ಲೋಬಲ್ ಟೈಮ್ಸ್ ಕೂಡ ಶ್ಲಾಘಿಸಿ ವರದಿ ಮಾಡಿದೆ. ಗ್ಲೋಬಲ್ ಟೈಮ್ಸ್‌ನಲ್ಲಿನ ಸುದ್ದಿ ಮತ್ತು ಲೇಖನಗಳನ್ನು ಚೀನಾ ಸರ್ಕಾರದ ಚಿಂತನೆ ಎಂದೇ ಕರೆಯಲಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಗ್ಲೋಬಲ್ ಟೈಮ್ಸ್ ಸಾಮಾನ್ಯವಾಗಿ ಭಾರತ ವಿರೋಧಿ ಲೇಖನ ಮತ್ತು ಸಂಪಾದಕೀಯಗಳಿಂದ ಸುದ್ದಿಯಲ್ಲಿತ್ತು. ಆದರೀಗ ಅದೇ ಪತ್ರಿಕೆಯಲ್ಲಿ ಜನವರಿ 2 ರಂದು ಪ್ರಕಟವಾದ ಲೇಖನದಲ್ಲಿ ಭಾರತದಲ್ಲಿನ ಪ್ರಗತಿ ಬಗ್ಗೆ ಉಲ್ಲೇಖಿಸಲಾಗಿದೆ.
'ಭಾರತದ ನಿರೂಪಣೆ' ಎಂಬ ಶೀರ್ಷಿಕೆಯ ಲೇಖನದಲ್ಲಿ ಚೀನಾದ ಫುಡಾನ್ ವಿಶ್ವವಿದ್ಯಾನಿಲಯದ ದಕ್ಷಿಣ ಏಷ್ಯಾ ಅಧ್ಯಯನ ಕೇಂದ್ರದ ನಿರ್ದೇಶಕ ಜಾಂಗ್ ಜಿಯಾಡಾಂಗ್ ಅವರು ಆರ್ಥಿಕ ಅಭಿವೃದ್ಧಿಯ ದಿಕ್ಕಿನಲ್ಲಿ ಭಾರತವು ಉತ್ತಮ ಯಶಸ್ಸು ಸಾಧಿಸಿದೆ. ಹಾಗೂ ಈಗ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ. ಹಿಂದಿನ ನಾಲ್ಕು ವರ್ಷಗಳಲ್ಲಿನ ಭಾರತದ ಗಮನಾರ್ಹ ಪ್ರಗತಿಯ ಬಗ್ಗೆ ಒತ್ತಿ ಹೇಳಿದ್ದಾರೆ.
ಇತ್ತೀಚೆಗೆ ಭಾರತಕ್ಕೆ ತಾವು ಎರಡು ಸಲ ಭೇಟಿ ನೀಡಿರುವುದಾಗಿ ಜಾಂಗ್ ಜಿಯಾಡಾಂಗ್ ಅವರು ಹೇಳಿಕೊಂಡಿದ್ದಾರೆ. 'ನನ್ನ ಭೇಟಿಯ ಸಮಯದಲ್ಲಿ, ನಾಲ್ಕು ವರ್ಷಗಳ ಹಿಂದಿನ ದೇಶಕ್ಕೆ ಹೋಲಿಸಿದರೆ, ಭಾರತದ ದೇಶೀಯ ಮತ್ತು ಅಂತಾರಾಷ್ಟ್ರೀಯ ಪರಿಸ್ಥಿತಿಗಳು ಬಹಳಷ್ಟು ಬದಲಾಗಿರುವುದನ್ನು ನಾನು ಕಂಡಿದ್ದೇನೆ. ಭಾರತವು ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಆಡಳಿತ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ. ಭಾರತದ ಆರ್ಥಿಕತೆಯು ವೇಗ ಪಡೆದುಕೊಂಡಿದೆ. ಕ್ಷಿಪ್ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯೊಂದಿಗೆ ದೇಶವು ಹೆಚ್ಚು ಆತ್ಮವಿಶ್ವಾಸ ಹೊಂದಿದೆ' ಎಂದು ತಿಳಿಸಿದ್ದಾರೆ.
'ಭಾರತದ ಕಾರ್ಯತಂತ್ರದ ಚಿಂತನೆಯಲ್ಲಿ ಸಾಕಷ್ಟು ಬದಲಾವಣೆ': ಗ್ಲೋಬಲ್ ಟೈಮ್ಸ್‌ನ ಲೇಖನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನಮಾನದ ಬಗ್ಗೆ ಉಲ್ಲೇಖಿಸಲಾಗಿದೆ. ರಾಜತಾಂತ್ರಿಕ ಕ್ಷೇತ್ರದಲ್ಲಿ ದೇಶವು ದೊಡ್ಡ ಶಕ್ತಿಯಾಗುವ ಮೂಲಕ ತಂತ್ರಗಾರಿಕೆಯಲ್ಲಿ ವೇಗವಾಗಿ ಸಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ಅನೇಕ ದೇಶಗಳೊಂದಿಗೆ ಏಕಕಾಲದಲ್ಲಿ ಮೈತ್ರಿ ಮಾಡಿಕೊಳ್ಳುವ ತಂತ್ರ ಅನುಸರಿಸಿದ್ದಾರೆ. ಅವರು ಅಮೆರಿಕ, ಜಪಾನ್, ರಷ್ಯಾ ಮತ್ತು ಇತರೆ ದೇಶಗಳು ಹಾಗೂ ಪ್ರಾದೇಶಿಕ ಸಂಸ್ಥೆಗಳೊಂದಿಗೆ ಭಾರತದ ಸಂಬಂಧವನ್ನು ಸುಧಾರಿಸಿದ್ದಾರೆ. ವಿದೇಶಾಂಗ ನೀತಿಯಲ್ಲಿ ಭಾರತದ ವ್ಯೂಹಾತ್ಮಕ ಚಿಂತನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಮತ್ತು ದೊಡ್ಡ ಶಕ್ತಿಯಾಗುವತ್ತ ಸಾಗಿದೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ತನ್ನನ್ನು ಪಾಶ್ಚಿಮಾತ್ಯ ದೇಶಗಳಿಂದ ದೂರವಿಟ್ಟುಕೊಂಡು, ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಹೆಚ್ಚು ನಿಕಟ ಸಂಬಂಧ ಹೊಂದಿತ್ತು ಎಂದು ತಿಳಿಸಲಾಗಿದೆ.
ಗ್ಲೋಬಲ್ ಟೈಮ್ಸ್ ಲೇಖನದ ಪ್ರಕಾರ, ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಭಾರತವು ಪ್ರಜಾಪ್ರಭುತ್ವ ರಾಜಕೀಯದ ಅನನ್ಯತೆಯನ್ನು ಒತ್ತಿಹೇಳುವ ಮೂಲಕ ಮುನ್ನಡೆದಿದೆ. ವಸಾಹತುಶಾಹಿಯಿಂದ ಹೊರಬಂದ ಬಳಿಕ ಈಗ ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ವಿಶ್ವ ನಾಯಕನಾಗಲು ಬಯಸಿದೆ. ತನ್ನ ಹಿತಾಸಕ್ತಿ ಹೆಚ್ಚಿಸಲು ಅಥವಾ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಸಾಂಸ್ಕೃತಿಕ ಸಂಪ್ರದಾಯಗಳಿಗೆ ಮಹತ್ವ ನೀಡುತ್ತಿದೆ. ಇದನ್ನು ಹೊಸ ನಿಲುವಿನ ಆಧಾರ ಸ್ತಂಭವೆಂದು ಪರಿಗಣಿಸಿದೆ. ತನ್ನನ್ನು ವಿಶ್ವ ಶಕ್ತಿ ಎಂದು ಪರಿಗಣಿಸಿಕೊಂಡು ಬೇರೆ ಬೇರೆ ದೇಶಗಳೊಂದಿಗೆ ಸಮತೋಲನ ಸಾಧಿಸುವ ತಂತ್ರದಿಂದ ಮೈತ್ರಿ ಮಾಡಿಕೊಂಡಿದೆ. ಅಂತಾರಾಷ್ಟ್ರೀಯ ಸಂಬಂಧಗಳ ಇತಿಹಾಸದಲ್ಲಿ ಇಂತಹ ಕ್ಷಿಪ್ರ ಬದಲಾವಣೆಗಳು ಕಂಡುಬರುವುದು ವಿರಳ. ಭಾರತ ನಿಜಕ್ಕೂ ದೊಡ್ಡ ಶಕ್ತಿ ಎಂದು ಹೊಗಳಲಾಗಿದೆ.
ಇದನ್ನೂ ಓದಿ :3 ದಶಲಕ್ಷ ಎಲೆಕ್ಟ್ರಿಕ್ ವಾಹನ ಮಾರಿದ ಬಿವೈಡಿ; ಟೆಸ್ಲಾ ಹಿಂದಿಕ್ಕಿದ ಚೀನಾ ಕಂಪನಿ
ಈ ಪತ್ರಿಕೆಯು ಪೀಪಲ್ಸ್ ಡೈಲಿ ಒಡೆತನದಲ್ಲಿದೆ, ಇದು ಚೀನಾದ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಅಧಿಕೃತ ಪತ್ರಿಕೆಯಾಗಿದೆ. ಗ್ಲೋಬಲ್ ಟೈಮ್ಸ್‌ನಲ್ಲಿ ಪ್ರಕಟವಾದ ಸುದ್ದಿ ಮತ್ತು ಲೇಖನಗಳನ್ನು ಚೀನಾ ಸರ್ಕಾರದ ಅಭಿಪ್ರಾಯಗಳೆಂದೇ ಪರಿಗಣಿಸಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಚೀನಾದೊಂದಿಗಿನ ಭಾರತದ ಸಂಬಂಧವು ಅಷ್ಟೊಂದು ಉತ್ತಮವಾಗಿಲ್ಲ. ಇದೆಲ್ಲದರ ನಡುವೆ ಗ್ಲೋಬಲ್ ಟೈಮ್ಸ್ ಇಂಥದ್ದೊಂದು ಲೇಖನ ಪ್ರಕಟಿಸಿರುವುದು ಸಾಕಷ್ಟು ಚರ್ಚೆಯಾಗುತ್ತಿದೆ.