ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರ (ಆಂಧ್ರಪ್ರದೇಶ) :ಇಂದು ಮಧ್ಯಾಹ್ನ 2.35 ಕ್ಕೆ ಭಾರತದ ಚಂದ್ರಯಾನ-3 ಉಡಾವಣೆಗೆ ಆಂಧ್ರಪ್ರದೇಶದ ಸುಳ್ಳೂರುಪೇಟೆಯಲ್ಲಿರುವ ಇಸ್ರೋದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರ ಸಿದ್ಧವಾಗಿದ್ದು, ಐತಿಹಾಸಿಕ ದಾಖಲೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ನಡೆಸಿದ ಚಂದ್ರಯಾನ-2 ರ ಮುಂದುವರೆದ ಭಾಗವಾಗಿದೆ.
ಚಂದ್ರಯಾನ 3 ಮಿಷನ್ ಉದ್ದೇಶಗಳು: ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಸಾಫ್ಟ್ ಲ್ಯಾಂಡಿಂಗ್ ಮಾಡುವಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವುದು, ಚಂದ್ರನ ಮೇಲೆ ರೋವರ್ ಇಳಿಸುವುದು ಮತ್ತು ಆ ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಈ ಮಿಷನ್ನ ಪ್ರಮುಖ ಉದ್ದೇಶವಾಗಿದೆ. ಚಂದ್ರಯಾನ ಸರಣಿಯಲ್ಲಿ ಇದು ಭಾರತದ 3ನೇ ಉಡಾವಣೆಯಾಗಿದೆ. LVM3 M4 ಉಡಾವಣಾ ರಾಕೆಟ್ ಲ್ಯಾಂಡರ್, ರೋವರ್ ಮತ್ತು ಮಾಡ್ಯೂಲ್ ಹೊತ್ತು ನಭಕ್ಕೆ ಚಿಮ್ಮಲಿದೆ. ಈ ರಾಕೆಟ್ ಸುಮಾರು 3,84,000 ಕಿ.ಮೀ ದೂರ ಪ್ರಯಾಣಿಸಿ ಚಂದ್ರನ ಮೇಲಿರುವ 100 ಕಿಲೋಮೀಟರ್ ಕಕ್ಷೆಯನ್ನು ತಲುಪಲಿದೆ.
ISRO ವಿಜ್ಞಾನಿಗಳ ಪ್ರಕಾರ, ಲ್ಯಾಂಡರ್ ಮಾಡ್ಯೂಲ್ (LM), ಪ್ರೊಪಲ್ಷನ್ ಮಾಡ್ಯೂಲ್ (PM) ಮತ್ತು ರೋವರ್ ಮೂಲಕ ಚಂದ್ರಯಾನ-3 ಯಶಸ್ವಿಗೊಳಿಸುವ ಗುರಿ ಹೊಂದಲಾಗಿದೆ. ಹೀಗಾಗಿ, ಅತ್ಯಂತ ಸೂಕ್ಷ್ಮ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆಯನ್ನ ಇಳಿಸಲಾಗುವುದು. ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮತ್ತು ರೋವರ್ ಕಾನ್ಫಿಗರೇಶನ್ ಅನ್ನು ಚಂದ್ರನ ಕಕ್ಷೆಯಲ್ಲಿ 100 ಕಿ.ಮೀ ವರೆಗೆ ಸಾಗಿಸುತ್ತದೆ.
ಇನ್ನು ಇಸ್ರೋ ನೌಕೆಯು ಚಂದ್ರನ ನೆಲದಲ್ಲಿ ಇಳಿಯಲು 45 ರಿಂದ 48 ದಿನಗಳು ತೆಗೆದುಕೊಳ್ಳಬಹುದು. ಚಂದ್ರನಿಗೆ 5 ಬಾರಿ ಪ್ರದಕ್ಷಿಣೆ ಹಾಕಿದ ಬಳಿಕ ಇಳಿಯಬೇಕಾದ ಲ್ಯಾಂಡರ್ ಮಾಡ್ಯೂಲ್, ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಡುತ್ತದೆ. ಬಳಿಕ, ಪ್ರೊಪಲ್ಷನ್ ಮಾಡ್ಯೂಲ್ ಅದೇ ಕಕ್ಷೆಯಲ್ಲೇ ಸುತ್ತುವುದು ಮುಂದುವರಿಸುತ್ತದೆ. ಲ್ಯಾಂಡರ್ ನಿಧಾನಕ್ಕೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಪ್ರಾರಂಭಿಸುತ್ತದೆ. ಲ್ಯಾಂಡರ್ ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಒಟ್ಟು 8 ಸಣ್ಣ ಎಂಜಿನ್‌ಗಳನ್ನ ಹೊಂದಿದೆ. ಇದು ವಾಹನವನ್ನು ನಿರ್ದೇಶಿಸಲು ಮತ್ತು ತಿರುಗಿಸಲು ನೆರವಾಗುತ್ತದೆ. ಇವುಗಳನ್ನು 'ಲ್ಯಾಂಡರ್ ಪ್ರೊಪಲ್ಷನ್ ಸಿಸ್ಟಂ' ಎನ್ನಲಾಗುತ್ತದೆ. ಲ್ಯಾಂಡರ್ ಸೆಕೆಂಡಿಗೆ 2 ಮೀಟರ್ ವೇಗದಲ್ಲಿ ಇಳಿಯುತ್ತದೆ. ಆದರೆ, ಮೇಲ್ಮೈ ಮೇಲೆ ಇಳಿಯುವ ವೇಳೆ ಅದು ಸೆಕೆಂಡಿಗೆ 0.5 ಮೀ. ವೇಗವನ್ನಷ್ಟೇ ಹೊಂದಿರುತ್ತದೆ.