ನವದೆಹಲಿ: ಭಾರತದಲ್ಲಿ ಮತ್ತೆ ಕೋವಿಡ್ ಸಾವು-ನೋವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಮೂರನೇ ಅಲೆಯ ಭೀತಿ ಉದ್ಭವಿಸುತ್ತಿದೆ. ನಿನ್ನೆ ಒಂದೇ ದಿನ 46,759 ಮಂದಿ ಸೋಂಕಿತರು ಪತ್ತೆಯಾಗಿದ್ದು, 509 ಸೋಂಕಿತರು ಬಲಿಯಾಗಿದ್ದಾರೆ. ಈ ಪೈಕಿ ಕೇರಳದಲ್ಲೇ 31,374 ಕೇಸ್ಗಳು ಹಾಗೂ 179 ಸಾವಿನ ವರದಿಯಾಗಿದೆ.
ಚೇತರಿಕೆ ಪ್ರಮಾಣ ಶೇ.97.56ಕ್ಕೆ ಏರಿಕೆ
ದೇಶದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3,26,49,947ಕ್ಕೆ ಹಾಗೂ ಮೃತರ ಸಂಖ್ಯೆ 4,37,370ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ ಶೇ.97.56 ರಷ್ಟು ಅಂದರೆ 3,18,52,802 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ ಶೇ.1.10 ರಷ್ಟು ( 3,59,775) ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.