ನವದೆಹಲಿ : ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಕೋವಿಡ್ -19 ಲಸಿಕೆಗಳ ಲಭ್ಯತೆ, ಬಳಸಿಕೊಳ್ಳುವಿಕೆ ಮತ್ತು ವಿತರಣೆಗೆ ಸಂಬಂಧಿಸಿದಂತೆ ಜಾಗತಿಕ ಸಮುದಾಯ ಎದುರಿಸುತ್ತಿರುವ ಸವಾಲುಗಳಿಗೆ ಸಂಬಂಧಿಸಿದ ಐದು ಆತಂಕಗಳನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ ) ಯಲ್ಲಿ ಭಾರತ ಮಂಡಿಸಿದೆ.
ವಿದೇಶಿ ಗಣ್ಯರ ಸಮ್ಮುಖದಲ್ಲಿ 2523 (2020) ನಿರ್ಣಯದ ಅನುಷ್ಠಾನದ ಕುರಿತು ಮುಕ್ತ ಚರ್ಚೆಯಲ್ಲಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಯುಎನ್ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ, ಕೋವಿಡ್ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವ ಕುರಿತು ಸಚಿವ ಜೈ ಶಂಕರ್ ಆಶಾಭಾವನೆ ವ್ಯಕ್ತಪಡಿಸಿದರು. ಅಲ್ಲದೇ, ಭಾರತ ಹಂಚಿಕೊಳ್ಳಲು ಬಯಸುವ ಐದು ವಿಷಯಗಳನ್ನು ಮಂಡಿಸಿದರು.
ಅವುಗಳಲ್ಲಿ ಮೊದಲನೆಯದು, ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಜಾಗತಿಕ ಸಮನ್ವಯದ ಕೊರತೆಯು ಸಂಘರ್ಷ ಪೀಡಿತ ಪ್ರದೇಶಗಳು ಮತ್ತು ಬಡ ದೇಶಗಳಿಗೆ ಸವಾಲಾಗಿದೆ. ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಮಾಹಿತಿ ಪ್ರಕಾರ ಆ ಪ್ರದೇಶಗಳಲ್ಲಿ 60 ದಶಲಕ್ಷಕ್ಕೂ ಹೆಚ್ಚು ಜನರು ಅಪಾಯದಲ್ಲಿದ್ದಾರೆ.
ಎರಡನೇಯದಾಗಿ, ಪ್ರಸ್ತುತ, ಜಾಗತಿಕವಾಗಿ ಲಸಿಕೆಗಳ ವಿತರಣೆಯಲ್ಲಿ ಅಸಮಾನತೆಯಿದೆ, ಕೋವಿಡ್ ಪ್ರಭಾವ ತಗ್ಗಿಸಲು ಲಸಿಕೆಗಳ ಬಳಕೆಯಲ್ಲಿ ಸಮಾನತೆಯು ಮುಖ್ಯವಾಗಿದೆ.