ನವದೆಹಲಿ:ಭಾರತ್ ಬಯೋಟೆಕ್ ಮತ್ತು ಇತರ ಕಂಪನಿಗಳು ಅತ್ಯಂತ ವೇಗವಾಗಿ ಕೋವಿಡ್ ಲಸಿಕೆಯ ಪ್ರಯೋಗಗಳನ್ನು ಮಾಡುತ್ತಿವೆ. ಇದೇ ವರ್ಷದ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ದೇಶದಲ್ಲಿ ಎರಡು ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಸಿಗುವ ಸಾಧ್ಯತೆಯಿದೆ ಎಂದು ದೆಹಲಿ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಸಾಮಾನ್ಯವಾಗಿ ಸೌಮ್ಯವಾದ ಕೋವಿಡ್ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ಎರಡು ಅಥವಾ ಮೂರು ಹಂತದ ಪ್ರಯೋಗದ ನಂತರ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದರು.
ಕೋವಿಡ್ ಸಾಂಕ್ರಾಮಿಕವನ್ನು ನಿಯಂತ್ರಿಸಬೇಕಾದರೆ ಎಲ್ಲರಿಗೂ ಲಸಿಕೆ ನೀಡಬೇಕು. ಈಗಾಗಲೇ ಕೆಲವು ಪೋಷಕರು ತಮ್ಮ ಮಕ್ಕಳೊಂದಿಗೆ ಪ್ರಯೋಗಗಳಿಗೆ ಬಂದಿದ್ದಾರೆ. ಆದಷ್ಟು ವೇಗವಾಗಿ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಮಕ್ಕಳಿಗೆ ಲಸಿಕೆ ತಯಾರಿಯಲ್ಲಿ ನಾವು ಯಶಸ್ವಿಯಾಗಲಿದ್ದೇವೆ. ನಮ್ಮ ದೇಶವೇ ಸ್ವತಃ ಉತ್ಪಾದಿಸಿದ ಲಸಿಕೆಗಳನ್ನು ನೀಡಲಿದೆ ಎಂದು ರಂದೀಪ್ ತಿಳಿಸಿದ್ದಾರೆ.