ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 605 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಸೋಮವಾರಕ್ಕೆ ಹೋಲಿಕೆ ಮಾಡಿದರೆ ಕೊಂಚ ಇಳಿಕೆ ಕಂಡಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ನಾಲ್ಕು ಸಾವು ಸಂಭವಿಸಿದೆ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ಬುಧವಾರ ಬೆಳಗ್ಗೆ ಮಾಹಿತಿ ಹಂಚಿಕೊಂಡಿದೆ.
ಬುಧವಾರ ಬೆಳಗ್ಗೆ 8ಕ್ಕೆ ಪ್ರಕಟವಾದ ಆರೋಗ್ಯ ಸಚಿವಾಲಯದ ಮಾಹಿತಿಯಂತೆ, ಕರ್ನಾಟಕ ಮತ್ತು ಕೇರಳದಲ್ಲಿ ತಲಾ ಎರಡು ಸಾವು ಸಂಭವಿಸಿದೆ. ಮಂಗಳವಾರ ದೇಶದಲ್ಲಿ ಒಟ್ಟು ಆರು ಸಾವಿನ ಪ್ರಕರಣ ದಾಖಲಾಗಿತ್ತು. ಸೋಮವಾರ ದೇಶದಲ್ಲಿ ಒಟ್ಟಾರೆ ಸಕ್ರಿಯ ಸೋಂಕಿನ ಸಂಖ್ಯೆ 3,919 ದಾಖಲಾಗಿದ್ದು, ಬುಧವಾರ 3,643 ದಾಖಲಾಗಿದ್ದು, ಅಲ್ಪಮಟ್ಟದ ಕುಸಿತ ಕಂಡಿದೆ.
ದೇಶದಲ್ಲಿ ಕೊರೋನಾ ವೈರಸ್ನ ಮೊದಲ ಪ್ರಕರಣ ದಾಖಲು ಆದಗಿನಿಂದ ಅಂದರೆ 2020ರ ಜನವರಿಯಿಂದ ಇಲ್ಲಿಯವರೆಗೆ ಒಟ್ಟಾರೆ 4,50,19,819 ಸೋಂಕು ದೃಢಪಟ್ಟಿದ್ದು, ಸಾವಿನ ಸಂಖ್ಯೆ 5,33,406 ಆಗಿದೆ.
ಈ ಬಾರಿ ಅಂದರೆ 2023 ರ ಚಳಿಗಾಲದಲ್ಲಿ ಕೋವಿಡ್ ಪ್ರಕರಣಗಳ ಏರಿಕೆಗೆ ಓಮ್ರಿಕಾನ್ ಉಪತಳಿ ಬಿಎ.2.86 ಅಥವಾ ಪಿರೋಲ್ ತಳಿಯಾಗಿರುವ ಜೆಎನ್.1 ಕಾರಣವಾಗಿದೆ. ದೇಶದಲ್ಲಿ ಮೊದಲ ಜೆಎನ್.1 ಪ್ರಕರಣ ಕೇರಳದಲ್ಲಿ ವರದಿಯಾಗಿತ್ತು. ಅತ್ಯಂತ ವೇಗವಾಗಿ ಹರಡುವ ಈ ಜೆಎನ್.1 ಸೋಂಕು ಇದೀಗ ಮಹಾರಾಷ್ಟ್ರದಲ್ಲಿ ಪ್ರಾಬಲ್ಯ ಮೆರೆಯುತ್ತಿದೆ. ದೇಶದಲ್ಲಿ 12 ರಾಜ್ಯದಲ್ಲಿ ಜೆಎನ್.1 ಸಕ್ರಿಯ ಪ್ರಕರಣ 682 ದಾಖಲಾಗಿದೆ.