ನವದೆಹಲಿ:ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಭಾರತವು ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳಲ್ಲಿ ಖಂಡಿಸುತ್ತದೆ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ತಮಗೆ ಕರೆ ಮಾಡಿ ಇಸ್ರೇಲ್ನ ಬೆಳವಣಿಗೆಗಳ ಮಾಹಿತಿ ನೀಡಿದರು ಎಂದು ಬರೆದಿದ್ದಾರೆ. "ಈ ಕಷ್ಟದ ಸಮಯದಲ್ಲಿ ಭಾರತದ ಜನರು ಇಸ್ರೇಲ್ನೊಂದಿಗೆ ದೃಢವಾಗಿ ಬೆಂಬಲಕ್ಕೆ ನಿಲ್ಲುತ್ತಾರೆ. ಭಾರತವು ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಬಲವಾಗಿ ಮತ್ತು ನಿಸ್ಸಂದಿಗ್ಧವಾಗಿ ಖಂಡಿಸುತ್ತದೆ" ಎಂದು ಪ್ರಧಾನಿ ಬರೆದಿದ್ದಾರೆ.
ನೆತನ್ಯಾಹು ಅವರ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ ಬಗ್ಗೆ ಪ್ರಧಾನಿ ಮಾಡಿದ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ನ ವಿದೇಶಾಂಗ ಸಚಿವಾಲಯ, "ಥ್ಯಾಂಕ್ ಯು ಪ್ರಧಾನಿ ನರೇಂದ್ರ ಮೋದಿ" ಎಂದು ಪೋಸ್ಟ್ ಮಾಡಿದೆ. ಇದಕ್ಕೂ ಮುನ್ನ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆದ ನಂತರ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಪ್ರಧಾನಿ ಮೋದಿ, "ಭಯೋತ್ಪಾದಕ ದಾಳಿಯ ಸುದ್ದಿಯಿಂದ ಆಘಾತವಾಗಿದೆ. ಈ ಸಂಕಷ್ಟದ ಸಮಯದಲ್ಲಿ ಭಾರತದ ಬೆಂಬಲ ಸದಾ ಇಸ್ರೇಲ್ ಜೊತೆಗೆ ಇರುತ್ತದೆ" ಎಂದು ಹೇಳಿದ್ದರು.