ನವದೆಹಲಿ :ಕೋವಿಡ್ ಸಾಂಕ್ರಾಮಿಕ ರೋಗದಿಂದ ಜನರು ಬಳಲುತ್ತಿರುವ ಸಮಯದಲ್ಲಿ ತಾವು ಮಾಡಬೇಕಿರುವ ಮೂಲಭೂತ ಕರ್ತವ್ಯಗಳನ್ನು ಮತ್ತು ಜವಾಬ್ದಾರಿಗಳನ್ನು ಮೋದಿ ಸರ್ಕಾರ ಮರೆತಿದೆ. ರಾಜಕೀಯ ನಾಯಕತ್ವದಿಂದ ದೇಶ ದುರ್ಬಲಗೊಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸಂಸದರ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಕೋವಿಡ್ ಪರಿಸ್ಥಿತಿಯನ್ನು ಚರ್ಚಿಸಲು ಎಲ್ಲಾ ಪಕ್ಷಗಳ ಸಭೆಯನ್ನು ತುರ್ತಾಗಿ ಕರೆಯಬೇಕು ಎಂದು ಪ್ರಧಾನಿಯನ್ನು ಒತ್ತಾಯಿಸಿದರು.
ಇದನ್ನೂ ಓದಿ:ಕೋವಿಡ್ 2ನೇ ಅಲೆ ನಡುವೆ ಆರ್ಥಿಕ ಹಿಂಜರಿತದ ಭೀತಿ.. ಆದರೂ ಚೇತರಿಕೆ ನಿರೀಕ್ಷೆ!
ಇದರ ಜೊತೆಗೆ ಸಾಂಕ್ರಾಮಿಕ ರೋಗವನ್ನು ಉತ್ತಮವಾಗಿ ಎದುರಿಸಲು ಮತ್ತು ತಮ್ಮ ತಮ್ಮ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಸ್ಥಾಯಿ ಸಮಿತಿ ಸಭೆಗಳನ್ನು ಕರೆಯಬೇಕು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ದೇಶದಲ್ಲಿ ವ್ಯವಸ್ಥೆ ವಿಫಲವಾಗಿಲ್ಲ. ಅದಕ್ಕೆ ಬದಲಾಗಿ ಭಾರತದ ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ರಚನಾತ್ಮಕವಾಗಿ ಬಲಪಡಿಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ ಎಂದು ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ದೇಶವು ಮಾರಣಾಂತಿಕ ರೋಗದ ಕಪಿಮುಷ್ಟಿಯಲ್ಲಿದೆ. ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ಜನರು ತಮ್ಮ ಆರೋಗ್ಯ ಉಳಿಸಿಕೊಳ್ಳಲು ಮತ್ತು ಔಷಧ, ಆಮ್ಲಜನಕ ಪಡೆಯಲು ಪರದಾಡುತ್ತಿದ್ದಾರೆ. ಈ ಸನ್ನಿವೇಶಗಳು ಹೃದಯವಿದ್ರಾವಕವಾಗಿವೆ ಎಂದು ಸೋನಿಯಾ ಹೇಳಿದ್ದಾರೆ.