ಹೈದರಾಬಾದ್:ನಮ್ಮ ದೇಶದಲ್ಲಿ ಮಹಿಳೆಯರ ಸುರಕ್ಷತೆಗೆ ಯಾವುದೇ ಅಪಾಯವಿಲ್ಲ ಎಂಬುದನ್ನು ಸಾರಲು ಮಧ್ಯಪ್ರದೇಶದ ಯುವತಿಯೊಬ್ಬರು ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ದೇಶದ ಎಲ್ಲ ಪ್ರಮುಖ ನಗರಗಳನ್ನು ಸಂಪರ್ಕಿಸುವ 25 ಸಾವಿರ ಕಿಲೋಮೀಟರ್ ವರೆಗೆ ಈ ಟ್ರಿಪ್ ನಡೆಯುತ್ತಿದೆ. ತೆಲುಗು ರಾಜ್ಯಗಳ ಮೂಲಕ ಸೈಕಲ್ ಯಾತ್ರೆ ಸಾಗಿದ ಸಂದರ್ಭದಲ್ಲಿ ಈಟಿವಿ ಭಾರತ್ ಅವರನ್ನು ವಿಶೇಷವಾಗಿ ಸ್ವಾಗತಿಸಿತು.
ಯಾರೀ ಯುವತಿ:ಕತ್ತಲನ್ನು ಸೀಳಿ ಉದಯಿಸುವ ಸೂರ್ಯನಂತೆ ಸೈಕಲ್ ತುಳಿಯುತ್ತಿರುವ ಈ ಯುವತಿಯ ಹೆಸರು ಆಶಾ ಮಾಳವೀಯ. ಇತ್ತೀಚೆಗೆ ಅವರು ಸಂಪೂರ್ಣ ಭಾರತ ಯಾತ್ರೆ ಆರಂಭಿಸಿದ್ದಾರೆ. ಇಡೀ ಭಾರತವನ್ನು ಸುತ್ತಲು ಅವರು ನಿರ್ಧರಿಸಿದ್ದಾರೆ. ದೇಶದ ಎಲ್ಲ ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಿಗೆ ಸೈಕಲ್ ಯಾತ್ರೆ ಭೇಟಿ ನೀಡಲಿದೆ. 1 ನವೆಂಬರ್ 2022 ರಂದು ಮಧ್ಯಪ್ರದೇಶದ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಯಾತ್ರೆಯು ಭೋಪಾಲ್‌ನಲ್ಲಿ ಪ್ರಾರಂಭವಾಯಿತು. ಆಶಾ ಮಾಳವೀಯ ಅವರ ಸೈಕಲ್ ಯಾತ್ರೆ ಇದುವರೆಗೆ 8 ರಾಜ್ಯಗಳ ಮೂಲಕ ಸಾಗಿದೆ. ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಯಾತ್ರೆ ಸಾಗಿ ಬಂದಿದೆ.
ಮಹಿಳಾ ಸಬಲೀಕರಣ ಮತ್ತು ಸುರಕ್ಷತೆಯ ಘೋಷವಾಕ್ಯದೊಂದಿಗೆ ಸೈಕಲ್ ಯಾತ್ರೆ ಮಾಡುತ್ತಿದ್ದೇನೆ ಎಂದು ಆಶಾ ಮಾಳವೀಯ ಹೇಳಿದ್ದಾರೆ. ನಮ್ಮ ದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಅವರ ಸುರಕ್ಷತೆಗೆ ಯಾವುದೇ ಧಕ್ಕೆ ಇಲ್ಲ ಎನ್ನುತ್ತಾರೆ ಆಶಾ. ಈ ಸಂದೇಶವನ್ನು ಎಲ್ಲರಿಗೂ ತಲುಪಿಸಲು ಯಾತ್ರೆ ಮಾಡಲಾಗುತ್ತಿದೆ. ಪ್ರವಾಸದ ವೇಳೆ ಪ್ರವಾಸಿ ಸ್ಥಳಗಳಿಗೂ ಭೇಟಿ ನೀಡುತ್ತಾರೆ ಆಶಾ. ಭಾರತ ಸುರಕ್ಷಿತ ದೇಶವಾಗಿದ್ದು, ಅಂತಾರಾಷ್ಟ್ರೀಯ ಪ್ರವಾಸಿಗರು ಭಾರತಕ್ಕೆ ಧೈರ್ಯದಿಂದ ಬರಬಹುದು, ಇಲ್ಲಿ ಅವರ ಸುರಕ್ಷತೆಗೆ ಯಾವುದೇ ಬೆದರಿಕೆ ಇಲ್ಲ ಎಂಬ ಸಂದೇಶವನ್ನು ಆಶಾ ಜಗತ್ತಿಗೆ ಈ ಮೂಲಕ ರವಾನಿಸುತ್ತಿದ್ದಾರೆ.