ನವದೆಹಲಿ:ರಷ್ಯಾ - ಉಕ್ರೇನ್ ಯುದ್ಧವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಿಕೊಳ್ಳಬೇಕೆಂಬುದೇ ಭಾರತದ ನಿಲುವಾಗಿದೆ. ಶಾಂತಿ ಪ್ರಕ್ರಿಯೆಗೆ ಯಾವುದೇ ಕೊಡುಗೆ ನೀಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದಾರೆ. ಜರ್ಮನ್ ಚಾನ್ಸೆಲರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಮತ್ತು ಭಾರತಕ್ಕೆ ಜಿ-20 ಅಧ್ಯಕ್ಷತೆ ಒಲಿದ ಬಳಿಕ ಮೊದಲ ಬಾರಿಗೆ ಸ್ಕೋಲ್ಜ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಇಂದು ಬೆಳಗ್ಗೆ ನವದೆಹಲಿಗೆ ಆಗಮಿಸಿದ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತ ನೀಡಲಾಯಿತು. ಈ ಸಮಾರಂಭದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡರು. ಇದೇ ವೇಳೆ ಉಭಯ ನಾಯಕರ ಭೇಟಿಯಾದ ನಂತರ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.
ಒಂದು ದುರಂತ ಎಂದ ಸ್ಕೋಲ್ಜ್: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಕುರಿತು ಮಾತನಾಡಿದ ಜರ್ಮನಿಯ ಚಾನ್ಸೆಲರ್ ಸ್ಕೋಲ್ಜ್, ಈಗ ನಡೆಯುತ್ತಿರುವ ರಷ್ಯಾ - ಉಕ್ರೇನ್ ಯುದ್ಧದ ಪರಿಣಾಮಗಳು ಪ್ರಪಂಚದ ಮೇಲೆ ಬೀರುತ್ತಿವೆ. ಗಡಿಗಳನ್ನು ಬಲ ಮತ್ತು ಹಿಂಸಾಚಾರದಿಂದ ಬದಲಾಯಿಸಲಾಗುವುದಿಲ್ಲ ಎಂದು ಹೇಳಿದರು. ಇದೇ ವೇಳೆ ಜೀವ ಮತ್ತು ಆಸ್ತಿಯ ನಷ್ಟಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸಿದ ಅವರು, ಈ ಯುದ್ಧವನ್ನು ''ಒಂದು ದುರಂತ" ಎಂದು ವ್ಯಾಖ್ಯಾನಿಸಿದರು.
ಇದನ್ನೂ ಓದಿ:ಭಾರತಕ್ಕೆ ಆಗಮಿಸಿರುವ ಜರ್ಮನ್ ಚಾನ್ಸಲರ್ ಓಲಾಫ್ ಸ್ಕೋಲ್ಜ್.. ನಾಳೆ ಬೆಂಗಳೂರಿಗೆ ಭೇಟಿ
ಅಲ್ಲದೇ, ಆಕ್ರಮಣಶೀಲತೆಯ ಭಯಾನಕ ಈ ಯುದ್ಧದಿಂದ ಬಲವಾಗಿ ಮತ್ತು ಋಣಾತ್ಮಕವಾಗಿ ಏಷ್ಯಾ, ಆಫ್ರಿಕಾ ಮತ್ತು ಅಮೆರಿಕದ ದೇಶಗಳು ಪ್ರಭಾವಿತವಾಗಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳಬೇಕೆಂದು ಸ್ಕೋಲ್ಜ್ ತಿಳಿಸಿದರು. ಮತ್ತೊಂದೆಡೆ, ಪ್ರಧಾನಿ ಮೋದಿ ಮಾತನಾಡಿ, ರಷ್ಯಾ - ಉಕ್ರೇನ್ ಯುದ್ಧದ ಆರಂಭದಿಂದಲೂ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮಾರ್ಗ ಮೂಲಕವೇ ಪರಿಹರಿಸಿಕೊಳ್ಳಲು ಭಾರತ ಒತ್ತು ನೀಡುತ್ತಿದೆ ಎಂದು ಹೇಳಿದರು.
ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ತೀವ್ರ ಪರಿಣಾಮ - ಮೋದಿ:ಕೋವಿಡ್ -19 ಸಾಂಕ್ರಾಮಿಕ ಮತ್ತು ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವನ್ನು ಜಗತ್ತು ಅನುಭವಿಸಿದೆ. ಇದು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಇನ್ನಷ್ಟು ತೀವ್ರವಾಗಿ ಪರಿಣಾಮ ಬೀರಿದೆ ಎಂದು ಮೋದಿ ತಮ್ಮ ಹೇಳಿಕೆಯಲ್ಲಿ ತಿಳಿಸಿದರು. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಭಾರತ ಮತ್ತು ಜರ್ಮನಿಯಿಂದ ಈ ಹೇಳಿಕೆಗಳು ಬಂದಿವೆ.
ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ಹತ್ತಿಕ್ಕಲು ಭಾರತ ಮತ್ತು ಜರ್ಮನಿ ನಡುವೆ ಸಕ್ರಿಯ ಸಹಕಾರವಿದೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ತೊಡೆದುಹಾಕಲು ಗಟ್ಟಿ ಕ್ರಮದ ಅಗತ್ಯವಿದೆ ಎಂಬ ಅಂಶವನ್ನು ಉಭಯ ದೇಶಗಳು ಒಪ್ಪಿಕೊಂಡಿವೆ. ಜಾಗತಿಕ ವಾಸ್ತವಗಳನ್ನು ಉತ್ತಮವಾಗಿ ಪ್ರತಿಬಿಂಬಿಸಲು ಬಹುಪಕ್ಷೀಯ ಸಂಸ್ಥೆಗಳ ಸುಧಾರಣೆ ಅಗತ್ಯ ಎಂಬ ಒಮ್ಮತವನ್ನು ನಾವು ಪುನರುಚ್ಚರಿಸಿದ್ದೇವೆ ಎಂದು ಪ್ರಧಾನಿ ಹೇಳಿದರು.
ಜರ್ಮನಿಯೊಂದಿಗಿನ ಭಾರತದ ದ್ವಿಪಕ್ಷೀಯ ಸಂಬಂಧಗಳಿಗೆ ಸಂಬಂಧಿಸಿದಂತೆ ಉಲ್ಲೇಖಿಸಿದ ಪ್ರಧಾನಿ ಮೋದಿ, ಇದು ಯುರೋಪ್‌ನಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ಮಾತ್ರವಲ್ಲದೆ ಭಾರತದಲ್ಲಿ ಹೂಡಿಕೆಗೆ ಪ್ರಮುಖ ಮೂಲವಾಗಿದೆ ಎಂದರು.
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್ ಕೊನೆಗೊಂಡಿದ್ದಕ್ಕೆ ಸಂತೋಷ: ನಿವೃತ್ತಿ ಸುಳಿವು ಕೊಟ್ರಾ ಸೋನಿಯಾ?