ದಿಬಾಂಗ್, ಅರುಣಾಲಪ್ರದೇಶ:ಅರುಣಾಚಲಪ್ರದೇಶದಲ್ಲಿ ಕಿಡಿಗೇಡಿ ಚೀನಾ ಖ್ಯಾತೆಯ ನಡುವೆಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದಿಬಾಂಗ್ ಕಣಿವೆಯ ಫಾರ್ವರ್ಡ್ ಪೋಸ್ಟ್ಗಳಿಗೆ ಭೇಟಿ ನೀಡಿ ಯೋಧರ ಜೊತೆಗೆ ಮಾತುಕತೆ ನಡೆಸಿದರು.
ಗಡಿ ಪ್ರದೇಶದಲ್ಲಿ ಚೀನಾ ಮೂಲಸೌಕರ್ಯಗಳನ್ನು ನಿರಂತರವಾಗಿ ನವೀಕರಿಸುತ್ತಿರುವುದಲ್ಲದೇ ಅರುಣಾಚಲ ಪ್ರದೇಶದ ಮೇಲೆ ಸಾರ್ವಭೌಮತ್ವ ಸಾಧಿಸಲು, ಅದನ್ನು ದಕ್ಷಿಣ ಟಿಬೆಟ್ ಎಂದು ನಾಮಕರಣ ಮಾಡಲು ಒತ್ತಾಯಿಸುತ್ತಿರುವ ಮಧ್ಯೆಯೇ ರಾಜನಾಥ್ ಸಿಂಗ್ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಅರುಣಾಚಲ ಪ್ರದೇಶವು ಉತ್ತರ ಮತ್ತು ಈಶಾನ್ಯದಲ್ಲಿ ಚೀನಾದೊಂದಿಗೆ ಸುಮಾರು 1,080 ಕಿಮೀ ಗಡಿಯನ್ನು ಹಂಚಿಕೊಂಡಿದೆ.
ಸೈನಿಕರ ಜೊತೆಗೆ ಮಾತುಕತೆ ನಡೆಸಿದ ರಾಜನಾಥ್ ಸಿಂಗ್, ಭಾರತ ಮತ್ತು ಭಾರತೀಯ ಸೇನೆ ಜಗತ್ತಿನಾದ್ಯಂತ ಗೌರವವನ್ನು ಪಡೆಯುತ್ತಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಗಂಭೀರವಾಗಿ ಪರಿಗಣಿಸದ ಸಮಯವಿತ್ತು. ಆದರೆ, ಇಂದು ಆ ಸನ್ನಿವೇಶಗಳು ಬದಲಾಗಿವೆ. ಪ್ರಧಾನಿ ಮೋದಿ ಅವರ ಪ್ರಯತ್ನದಿಂದಾಗಿ ಭಾರತೀಯ ಸೇನೆ ಪ್ರಪಂಚದಲ್ಲಿಯೇ ಗೌರವಕ್ಕೆ ಪಾತ್ರವಾಗಿದೆ ಎಂದರು.
ಸ್ನೇಹಪರ ವಿದೇಶಿ ರಾಷ್ಟ್ರಗಳು ನಮ್ಮಲ್ಲಿ ನಂಬಿಕೆ ಹೊಂದಿವೆ. ಭಾರತವು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲು ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇದೆಲ್ಲ ಒಂದಾದರೆ, ನಮ್ಮ ಸಶಸ್ತ್ರ ಪಡೆಗಳ ಶಕ್ತಿ, ಸಾಮರ್ಥ್ಯ ಪ್ರಪಂಚಕ್ಕೆ ಗೊತ್ತಾಗಿದೆ. ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದ್ದು, ಸೈನಿಕ ಸಾಮರ್ಥ್ಯವೂ ನಮ್ಮಲ್ಲಿದೆ ಎಂದು ಹೇಳಿದರು.
'ಆತ್ಮನಿರ್ಭರ್' ಅಡಿ ರಕ್ಷಣಾ ಉದ್ಯಮದ ಮೂಲಕ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸಲಕರಣೆಗಳ ಬೃಹತ್ ರಫ್ತುದಾರಿಕೆ ನಡೆಯುತ್ತಿದೆ. ಬಿಜೆಪಿ 2014 ರಿಂದ ಅಧಿಕಾರಕ್ಕೆ ಬಂದ ಬಳಿಕ ಮಿಲಿಟರಿ ಸಾಮರ್ಥ್ಯ ಬಲಪಡಿಸುವುದೇ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ರಾಜನಾಥ್ ಹೇಳಿದರು.
ಅರುಣಾಚಪ್ರದೇಶದ ಫಾರ್ವರ್ಡ್ ಪೋಸ್ಟ್ಗಳಿಗೆ ಎರಡು ದಿನಗಳ ಭೇಟಿ ನೀಡಿರುವ ರಾಜನಾಥ್ ಸಿಂಗ್ ಅವರು, ಭದ್ರತೆಗೆ ಸಂಬಂಧಿಸಿದ ವಿಷಯಗಳು ಮತ್ತು ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ದೇಶದ ರಕ್ಷಣಾ ಸನ್ನದ್ಧತೆಯ ಬಗ್ಗೆ ಮಾಹಿತಿ ಪಡೆದರು. ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಸಚಿವರೊಂದಿಗೆ ಇದ್ದರು.
ಓದಿ:ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ ದೋಣಿ..15 ಜನರ ರಕ್ಷಣೆ