ನವದೆಹಲಿ:ಕೋವಿಡ್ ನಂತರದ ದಿನಗಳಲ್ಲಿ ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 2022ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ದೇಶದ ಜಿಡಿಪಿ ಶೇಕಡಾ 8.4ಕ್ಕೆ ಏರಿಕೆಯಾಗಿದೆ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕೋವಿಡ್ ರೂಪಾಂತರಿ ತಳಿ ಒಮಿಕ್ರೋನ್ ಒಂದು ವೇಳೆ ಹಾನಿ ಉಂಟು ಮಾಡದಿದ್ದರೆ, 2020ನೇ ಹಣಕಾಸು ವರ್ಷದಲ್ಲಿದ್ದ ಜಿಡಿಪಿ ಮಟ್ಟವನ್ನು ಅಂದರೆ ಕೋವಿಡ್ ಕಾಣಿಸಿಕೊಳ್ಳುವುದಕ್ಕೂ ಮೊದಲಿದ್ದ ಆರ್ಥಿಕ ಸ್ಥಿತಿಯನ್ನು ಈ ಹಣಕಾಸು ವರ್ಷದಲ್ಲಿ ತಲುಪಲು ಸಾಧ್ಯವಿದೆ.
ಇದೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ದೇಶದಲ್ಲಿ ಶೇಕಡಾ 20.1ರಷ್ಟು ಜಿಡಿಪಿ ದಾಖಲಾಗಿತ್ತು. ಕೋವಿಡ್ ಕಾರಣಗಳಿಂದ ದಾಖಲಾಗಿದ್ದು ಆಗಿನ ಮೂಲ ದರಕ್ಕೆ ಹೋಲಿಸಿದರೆ, ಅದು ಅತ್ಯಂತ ಕಡಿಮೆಯಾಗಿತ್ತು. ಈಗ ಪ್ರಕಟವಾಗಿರುವ ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 8.4ರಷ್ಟು ಜಿಡಿಪಿ ದಾಖಲಾಗಿದ್ದು, ಹಿಂದಿನ ವರ್ಷ ಇದೇ ತ್ರೈಮಾಸಿಕದಲ್ಲಿ ಶೇಕಡಾ 7.4ರಷ್ಟು ಜಿಡಿಪಿ ದಾಖಲಾಗಿತ್ತು. ಅದಕ್ಕೆ ಹೋಲಿಸಿದರೆ, ಈಗಿನ ಜಿಡಿಪಿ ಸಾಕಷ್ಟು ಸುಧಾರಣೆ ಕಂಡಿದೆ.