ನವದೆಹಲಿ:ಪ್ರಸ್ತುತ ವರ್ಷ ಜಿ20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿರುವ ಭಾರತವು ದೇಶದ 50 ಪ್ರಮುಖ ನಗರಗಳಲ್ಲಿ ಸರಣಿ ಶೃಂಗಸಭೆಗಳನ್ನು ಹಮ್ಮಿಕೊಂಡಿದೆ. ಇದೀಗ ಮುಂದಿನ ಸಭೆಗಳಿಗೆ ಸ್ಥಳ ನಿಗದಿ ಮಾಡಿದ್ದು, ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಮೂಲಕ ನೆರೆಯ ವೈರಿ ದೇಶಗಳಾದ ಪಾಕಿಸ್ತಾನ ಮತ್ತು ಚೀನಾಗೆ ಸೆಡ್ಡು ಹೊಡೆದಿದೆ.
ಶ್ರೀನಗರದಲ್ಲಿ ಜಿ20 ಸಭೆ ಏರ್ಪಡಿಸುವ ನಿರ್ಧಾರದ ಬಗ್ಗೆ ಪಾಕಿಸ್ತಾನ ಮತ್ತು ಚೀನಾ ಅಪಸ್ವರ ಎತ್ತಿದೆ. ಪಾಕ್ ಈ ವಿಚಾರವನ್ನು ಮಿತ್ರ ರಾಷ್ಟ್ರವಾದ ಸೌದಿ ಅರೇಬಿಯಾದ ಮೂಲಕ ಒತ್ತಡ ಹೇರಿ ಸಭೆ ನಿಲ್ಲಿಸುವ ಕೆಲಸಕ್ಕೆ ಮುಂದಾಗಿದೆ. ಚೀನಾ ಇತ್ತೀಚೆಗೆ ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರು ಬದಲಾಯಿಸಿದ್ದು, ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿತ್ತು. ಇದರ ನಡುವೆ ಭಾರತ ಈ ಎರಡೂ ದೇಶಗಳ ಒತ್ತಡ ತಂತ್ರಗಳಿಗೆ ಸೊಪ್ಪು ಹಾಕದೇ ಇದೀಗ ಶ್ರೀನಗರದಲ್ಲಿ 20ಜಿ ಸಭೆ ನಡೆಸುವ ತನ್ನ ನಿರ್ಧಾರ ಪ್ರಕಟಿಸಿದೆ.
ಕಳೆದ ಶುಕ್ರವಾರ ಭಾರತ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳ ದಿನಾಂಕಗಳನ್ನು ಬಿಡುಗಡೆ ಮಾಡಿದ್ದು, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸಭೆಗಳು ಮೇ 22ರಿಂದ 24ರವರೆಗೆ ನಡೆಯಲಿದೆ ಎಂದು ತಿಳಿಸಿದೆ. ಚೀನಾವು ಅರುಣಾಚಲ ಪ್ರದೇಶದಲ್ಲಿ ನಡೆದ ಜಿ20 ಸಭೆಯನ್ನು ನಿರ್ಲಕ್ಷಿಸಿದ್ದು, ಪಾಲ್ಗೊಂಡಿರಲಿಲ್ಲ. ಹೀಗಾಗಿ, ಅದು ಶ್ರೀನಗರದಲ್ಲಿ ನಡೆಯುವ ಸಭೆಯನ್ನೂ ವಿರೋಧಿಸಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.