ನವದೆಹಲಿ:ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಹಿಂಸಾಚಾರ ಹೆಚ್ಚುತ್ತಿದೆ. ಅಲ್ಲಿಂದ ಪರಾರಿಯಾಗಿ ಪ್ರಾಣ ಕಾಪಾಡಿಕೊಳ್ಳಲು ಜನರು ಹರಸಾಹಸ ಪಡುತ್ತಿದ್ದಾರೆ. ಈ ಬಿಕ್ಕಟ್ಟಿನ ನಡುವೆ ಭಾರತವು ಕಾಬೂಲ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಸ್ಥಳಾಂತರಿಸಿದೆ. ಅಫ್ಘಾನಿಸ್ತಾನದ ತನ್ನ ರಾಯಭಾರಿಯನ್ನು ಸಿಬ್ಬಂದಿ ಮತ್ತು ಐಟಿಬಿಪಿ ಪಡೆಯೊಂದಿಗೆ ಮರಳಿ ದೇಶಕ್ಕೆ ಕರೆತಂದಿದೆ.
ಕಾಬೂಲ್ ವಿಮಾನ ನಿಲ್ದಾಣದಿಂದ 120 ಭಾರತೀಯ ಅಧಿಕಾರಿಗಳು ಮತ್ತು ಇತರರನ್ನು ಹೊತ್ತ ವಿಶೇಷ ಐಎಎಫ್ ಸಿ -17 ವಿಮಾನ ದೆಹಲಿಗೆ ಹೊರಟಿತ್ತು. ಇದೀಗ ಗುಜರಾತ್ನ ಜಮ್ನಗರ್ನಲ್ಲಿ ವಿಮಾನ ಲ್ಯಾಂಡ್ ಆಗಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, "ಪ್ರಸ್ತುತ ಕಾಣಿಸುವ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು, ಕಾಬೂಲ್‌ನಲ್ಲಿರುವ ನಮ್ಮ ರಾಯಭಾರಿ ಮತ್ತು ಸಿಬ್ಬಂದಿಯನ್ನು ತಕ್ಷಣವೇ ಭಾರತಕ್ಕೆ ಕರೆತರಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಇನ್ನು ಟ್ವೀಟ್ನಲ್ಲಿ ಹೆಲ್ಪ್ಲೈನ್ ಸಂಖ್ಯೆ 919717785379 ಹಾಗೂ ಇಮೇಲ್ ವಿಳಾಸವನ್ನು ಶೇರ್ ಮಾಡಿ, ಸಹಾಯದ ನಿರೀಕ್ಷೆಯಲ್ಲಿರುವವರು ಈ ಸಂಖ್ಯೆಗೆ ಕರೆ ಮಾಡುವಂತೆ ಅಥವಾ ವಿಷಯ ತಿಳಿಸುವಂತೆ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ:ಆಫ್ಘನ್ನ ರಾಯಭಾರ ಕಚೇರಿಯಲ್ಲಿ 200 ಭಾರತೀಯರು... ರಕ್ಷಣೆಗೆ ಧಾವಿಸಿದ ಏರ್ಫೋರ್ಸ್ ವಿಮಾನ
ಅಫ್ಘಾನಿಸ್ತಾನದಲ್ಲಿರುವ ಹಲವಾರು ಭಾರತೀಯರು ತಮ್ಮನ್ನು ಭಾರತಕ್ಕೆ ವಾಪಸ್ ಕರೆದುಕೊಂಡು ಹೋಗುವಂತೆ ವಿನಂತಿಸಿದ್ದರು. ಈ ಸಂಬಂಧ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ವೀಸಾ ನಿಬಂಧನೆಗಳನ್ನು ಪರಿಶೀಲಿಸಿ ಭಾರತಕ್ಕೆ ಪ್ರವೇಶಿಸಲು 'e-Emergency X-Misc Visa' ಎಂಬ ಹೊಸ ವರ್ಗದ ಎಲೆಕ್ಟ್ರಾನಿಕ್ ವೀಸಾವನ್ನು ಜಾರಿಗೆ ತಂದಿದೆ.
ಅಫ್ಘಾನಿಸ್ತಾನವು ಎರಡು ದಶಕಗಳಲ್ಲಿ ಅತ್ಯಂತ ಕೆಟ್ಟ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ಯುಎಸ್ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ವಾಪಸ್ ಪಡೆದ ನಂತರ ಆಗಸ್ಟ್ 15ರ ಸಂಜೆಯ ವೇಳೆಗೆ ಇಡೀ ದೇಶವನ್ನು ತಾಲಿಬಾನ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.