ನವದೆಹಲಿ:ಭಾರತದಲ್ಲಿ ಪ್ರಸ್ತುತ ಕೋವಿಡ್ ಪ್ರಕರಣದ ಬೆಳವಣಿಗೆಯೂ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ನಿರ್ಬಂಧಿಸುವುದು ಹಾಗೂ ಲಾಕ್‌ಡೌನ್ ಹೇರುವಷ್ಟರ ಮಟ್ಟಿಗೆ ಅಪಾಯಕರ ಸ್ಥಿತಿಗೆ ಬಂದಿಲ್ಲ. ಆದರೆ, ಕೆಲವು ದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳದ ಪರಿಣಾಮ ದೇಶದಲ್ಲಿ ಬಿಗಿಯಾದ ಕಣ್ಗಾವಲು ಮತ್ತು ಜಾಗರೂಕತೆ ಅವಶ್ಯವಿದೆ ಎಂದು ವಿವಿಧ ತಜ್ಞರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಡಾ ರಂದೀಪ್ ಗುಲೇರಿಯಾ ಹೇಳುವುದೇನು?ಭಾರತದಲ್ಲಿ 'ಹೈಬ್ರಿಡ್ ಇಮ್ಯುನಿಟಿ' ವ್ಯಾಕ್ಸಿನೇಷನ್‌ನಿಂದ ಬಲವರ್ಧಿತ ನೈಸರ್ಗಿಕ ಸೋಂಕಿನಿಂದ ಉತ್ಪತಿಯಾಗುವ ನಿರೋಧಕ ಶಕ್ತಿಯ ಪ್ರಯೋಜನದಿಂದ ತೀವ್ರವಾದ ಕೋವಿಡ್ ಪ್ರಕರಣಗಳು ಬಹಳ ವಿರಳವಾಗಿದೆ. ಪ್ರಸ್ತುತ ಭಾರತವು ಆರಾಮದಾಯಕ ಪರಿಸ್ಥಿತಿಯಲ್ಲಿದೆ. ಅಂತಾರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧಿಸುವ ಅಥವಾ ಲಾಕ್‌ಡೌನ್ ಹೇರುವ ಅಗತ್ಯವಿಲ್ಲ" ಎಂದು ಎಐಐಎಂಎಸ್ ಮಾಜಿ ನಿರ್ದೇಶಕ ಡಾ ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.
ಕೋವಿಡ್ ಹರಡುವಿಕೆ ತಡೆಗೆ ವಿಮಾನಗಳನ್ನು ನಿಷೇಧಿಸುವುದು ಪರಿಣಾಮಕಾರಿಯಲ್ಲ ಎಂದು ಹಿಂದಿನ ಅನುಭವಗಳಿಂದ ಗೊತ್ತಾಗುತ್ತದೆ. ಚೀನಾದಲ್ಲಿ ಭಯಾನಕವಾಗಿ ಜನರನ್ನು ಸತಾಯಿಸುತ್ತಿರುವ ಕೋವಿಡ್ ರೂಪಾಂತರ Omicron BF 7, ಭಾರತ ದೇಶದಲ್ಲಿ ಈಗಾಗಲೇ ಕಂಡುಬಂದಿದೆ ಎಂದಿದ್ದಾರೆ.
ಈಗಾಗಲೇ ಜನರಲ್ಲಿ ರೋಗನಿರೋಧಕ ಶಕ್ತಿ ಬಂದಿದೆ:ಮುಂದಿನ ದಿನಗಳಲ್ಲಿ ಲಾಕ್‌ಡೌನ್ ಅಗತ್ಯವಿದೆಯೇ ಎಂದು ಕೇಳಿದಾಗ, ಡಾ ಗುಲೇರಿಯಾ, "ಉತ್ತಮ ಲಸಿಕೆ ವ್ಯಾಪ್ತಿ ಮತ್ತು ನೈಸರ್ಗಿಕ ಸೋಂಕಿನಿಂದಾಗಿ ಭಾರತೀಯ ಜನಸಂಖ್ಯೆಯು ಈಗಾಗಲೇ ಹೈಬ್ರಿಡ್ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ತೀವ್ರವಾದ ಕೋವಿಡ್ ಪ್ರಕರಣಗಳು ಮತ್ತು ಆಸ್ಪತ್ರೆಗೆ ದಾಖಲಾಗುವುದು ಅಸಂಭವವಾಗಿದೆ" ಎಂದು ಹೇಳಿದರು.