ಕರ್ನಾಟಕ

karnataka

ETV Bharat / bharat

ರಾಷ್ಟ್ರಗಳ ಶ್ರೇಣೀಕೃತ ಪರಿಕಲ್ಪನೆಯನ್ನು ಭಾರತ ನಂಬುವುದಿಲ್ಲ: ರಕ್ಷಣಾ ಸಚಿವ ರಾಜನಾಥ್ ಸಿಂಗ್ - ಭಾರತದ ರಕ್ಷಣಾ ಪಾಲುದಾರಿಕೆ

ಏರೋ ಇಂಡಿಯಾ 2023ರ ಸಮಾವೇಶಕ್ಕೆ ಮುನ್ನ ನಡೆದ ರಾಯಭಾರಿಗಳ ಸಮಾವೇಶದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಳೆದ ಐದು ವರ್ಷಗಳಲ್ಲಿ ಭಾರತದ ರಕ್ಷಣಾ ರಫ್ತು ಎಂಟು ಪಟ್ಟು ಬೆಳೆದಿದೆ ಎಂದು ಹೇಳಿದರು.

ರಾಷ್ಟ್ರಗಳ ಶ್ರೇಣೀಕೃತ ಪರಿಕಲ್ಪನೆಯನ್ನು ಭಾರತ ನಂಬುವುದಿಲ್ಲ: ರಕ್ಷಣಾ ಸಚಿವ ರಾಜನಾಥ್ ಸಿಂಗ್
India does not believe in hierarchical concept of nations

By

Published : Jan 9, 2023, 3:36 PM IST

ನವದೆಹಲಿ: ಕೆಲವು ದೇಶಗಳನ್ನು ಇತರ ದೇಶಗಳಿಗಿಂತ ಶ್ರೇಷ್ಠ ಎಂದು ಪರಿಗಣಿಸುವ ವಿಶ್ವ ಕ್ರಮಾಂಕದ ಶ್ರೇಣೀಕೃತ ಪರಿಕಲ್ಪನೆಯನ್ನು ಭಾರತ ನಂಬುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದಾರೆ. ಮೇಕ್ ಇನ್ ಇಂಡಿಯಾದ ನಮ್ಮ ಪ್ರಯತ್ನಗಳು ಪ್ರತ್ಯೇಕವಾದದ್ದಲ್ಲ ಅಥವಾ ಭಾರತಕ್ಕಾಗಿ ಮಾತ್ರ ಉದ್ದೇಶಿಸಿಲ್ಲ. ಮೇಕ್ - ಇನ್ -ಇಂಡಿಯಾವು ಮೇಕ್ ಫಾರ್ ದಿ ವರ್ಲ್ಡ್ ಅನ್ನು ಒಳಗೊಳ್ಳುತ್ತದೆ ಎಂಬುದನ್ನು ನಾನು ಒತ್ತಿಹೇಳಲು ಬಯಸುತ್ತೇನೆ ಎಂದು ಏರೋ ಇಂಡಿಯಾ 2023 ಸಮಾವೇಶಕ್ಕೂ ಮುನ್ನ ನಡೆದ ರಾಯಭಾರಿಗಳ ಸಮಾವೇಶದಲ್ಲಿ ರಾಜನಾಥ್ ಸಿಂಗ್ ಹೇಳಿದರು.

ಭಾರತಕ್ಕೆ ಕ್ಲೈಂಟ್ ಅಥವಾ ಉಪಗ್ರಹ ರಾಜ್ಯವಾಗುವುದರಲ್ಲಿ ಅಥವಾ ಅಂಥ ರಾಜ್ಯ ಸೃಷ್ಟಿಸುವುದರಲ್ಲಿ ಯಾವುದೇ ನಂಬಿಕೆಯಿಲ್ಲ. ಭಾರತದ ಸ್ವಾವಲಂಬನೆಯ ಪ್ರಯತ್ನವು ಅದರ ಪಾಲುದಾರ ರಾಷ್ಟ್ರಗಳೊಂದಿಗೆ ಪಾಲುದಾರಿಕೆಯ ಹೊಸ ಮಾದರಿಯ ಪ್ರಾರಂಭವಾಗಿದೆ. ನಾವು ಯಾವುದೇ ರಾಷ್ಟ್ರದೊಂದಿಗೆ ಪಾಲುದಾರಿಕೆ ಮಾಡಿಕೊಂಡಾಗ ಅದು ಸಾರ್ವಭೌಮ ಸಮಾನತೆ ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ಮಾಡಲ್ಪಟ್ಟಿರುತ್ತದೆ ಎಂದು ಅವರು ಹೇಳಿದರು.

75 ರಾಷ್ಟ್ರಗಳಿಗೆ ರಕ್ಷಣಾ ರಫ್ತು:ಭಾರತದಲ್ಲಿ ನಡೆಯುತ್ತಿರುವ ವ್ಯಾಪಕ ರಕ್ಷಣಾ ಉನ್ನತೀಕರಣ ಮತ್ತು ದೇಶವು ಪ್ರಮುಖ ರಕ್ಷಣಾ ರಫ್ತುದಾರನಾಗುತ್ತಿರುವ ಬಗ್ಗೆ ಮಾತನಾಡಿದ ರಕ್ಷಣಾ ಸಚಿವರು, ಕಳೆದ ಐದು ವರ್ಷಗಳಲ್ಲಿ ಭಾರತದ ರಕ್ಷಣಾ ರಫ್ತು ಎಂಟು ಪಟ್ಟು ಬೆಳೆದಿದೆ ಮತ್ತು ಈ ಸಮಯದಲ್ಲಿ ನಾವು 75ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದೇವೆ ಎಂದು ಒತ್ತಿ ಹೇಳಿದರು.

ಏರೋ ಇಂಡಿಯಾವು ಪ್ರಮುಖ ಜಾಗತಿಕ ವಾಯುಯಾನ ವ್ಯಾಪಾರ ಮೇಳವಾಗಿದೆ. ಇದು ಏರೋಸ್ಪೇಸ್ ಉದ್ಯಮ ಸೇರಿದಂತೆ ನಮ್ಮ ವಾಯುಯಾನ - ರಕ್ಷಣಾ ಉದ್ಯಮಕ್ಕೆ ತನ್ನ ಉತ್ಪನ್ನಗಳು, ತಂತ್ರಜ್ಞಾನಗಳು ಮತ್ತು ಪರಿಹಾರಗಳನ್ನು ವಿವಿಧ ರಾಷ್ಟ್ರಗಳ ಮುಂದೆ ಪ್ರದರ್ಶಿಸಲು ಅವಕಾಶ ಒದಗಿಸುತ್ತದೆ ಎಂದು ರಕ್ಷಣಾ ಸಚಿವರು ಇದೇ ವೇಳೆ ಹೇಳಿದರು. ನಾವು ಈಗ ಏರೋ ಇಂಡಿಯಾ-2023 ರ 14 ನೇ ಆವೃತ್ತಿಯನ್ನು ಫೆಬ್ರವರಿ 13 ರಿಂದ 17 ರವರೆಗೆ ಬೆಂಗಳೂರಿನಲ್ಲಿ ಆಯೋಜಿಸುತ್ತಿದ್ದೇವೆ. ಈ ಬಾರಿಯ ಏರೋ ಇಂಡಿಯಾ-2023, ನಮ್ಮ ಸ್ನೇಹಪರ ದೇಶಗಳ ಪ್ರದರ್ಶಕರು ಮತ್ತು ಪ್ರತಿನಿಧಿಗಳ ದೊಡ್ಡ ಹಾಜರಾತಿಯೊಂದಿಗೆ ಹಿಂದಿನ ಸಮಾವೇಶಗಳನ್ನೂ ಮೀರಿಸಲಿದೆ ಎಂದು ರಕ್ಷಣಾ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಹಲವು ಪ್ರಮುಖ ವಿಚಾರಗಳ ಮೇಲೆ G20 ಸಮಾವೇಶ:G20 ಶೃಂಗಸಭೆಯ ಕುರಿತು ಮಾತನಾಡಿದ ಸಿಂಗ್, ಪ್ರಮುಖ ಭೌಗೋಳಿಕ ರಾಜಕೀಯ ಬಿಕ್ಕಟ್ಟು, ಆಹಾರ ಮತ್ತು ಇಂಧನ ಭದ್ರತೆ ಕಾಳಜಿಗಳು, ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲೆ ತುಲನಾತ್ಮಕವಾಗಿ ನಿಧಾನಗತಿಯ ಪ್ರಗತಿ, ಹೆಚ್ಚುತ್ತಿರುವ ಸಾರ್ವಜನಿಕ ಸಾಲದ ಹೊರೆಗಳು ಮತ್ತು ತುರ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ವಿವಿಧ ವ್ಯಾಪಕ ಶ್ರೇಣಿಯ ವಿಚಾರಗಳ ಮೇಲೆ ಭಾರತದಲ್ಲಿ G20 ಸಮಾವೇಶ ನಡೆಯಲಿದೆ. ನಾವು G20 ಅಧ್ಯಕ್ಷತೆಯನ್ನು ಜಗತ್ತಿಗೆ ಭಾರತದ 3 ಡಿ-ಅಭಿವೃದ್ಧಿ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಗಳನ್ನು ತೋರಿಸುವ ಒಂದು ಅವಕಾಶ ಎಂದು ಭಾವಿಸುತ್ತೇವೆ ಎಂದು ಅವರು ಹೇಳಿದರು.

ಭಾರತದ ರಕ್ಷಣಾ ಪಾಲುದಾರಿಕೆಗಳ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್, 'ಪಾಲುದಾರಿಕೆ' ಮತ್ತು 'ಜಂಟಿ ಪ್ರಯತ್ನಗಳು' ಭಾರತದ ರಕ್ಷಣಾ ಉದ್ಯಮದ ಪಾಲುದಾರಿಕೆಯನ್ನು ಇತರ ರಾಷ್ಟ್ರಗಳೊಂದಿಗೆ ಪ್ರತ್ಯೇಕಿಸುವ ಎರಡು ಅಂಶಗಳಾಗಿವೆ. ನಾವು ನಮ್ಮ ರಕ್ಷಣಾ ಸಾಧನಗಳನ್ನು ನಮ್ಮ ಸ್ನೇಹಪರ ರಾಷ್ಟ್ರಗಳಿಗೆ ರಫ್ತು ಮಾಡುವಾಗ, ತಂತ್ರಜ್ಞಾನ, ತರಬೇತಿ, ಸಹ-ಉತ್ಪಾದನೆಯ ಹಂಚಿಕೆಯ ಮೂಲಕ ಖರೀದಿದಾರರ ಸಾಮರ್ಥ್ಯ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಭಗವದ್ಗೀತೆ ಸರ್ವಕಾಲಕ್ಕೂ ಪ್ರಸ್ತುತ: ರಾಜನಾಥ್ ಸಿಂಗ್

ABOUT THE AUTHOR

...view details